14
– ನವೀನ್ ಸೂರಿಂಜೆ
ಮೇ 04 ದೇಶದ ಪಾಲಿಗೆ ಕರಾಳ ದಿನ. ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ‘ಇನ್ಮುಂದೆ ಭಾರತ ನಮ್ಮದು’ ಎಂದು ಅಧಿಕೃತ ಘೋಷಿಸಿದ ದಿನವಿದು. ಕರ್ನಾಟಕದ ಪಾಲಿಗಂತೂ ದೇಶಪ್ರೇಮಿ ಜನರು ಮರೆಯಬಾರದ ದಿನ. ಶ್ರೀರಂಗಪಟ್ಟಣದ ಕೋಟೆಯ ಮೇಲೆ ಹಾರಾಡುತ್ತಿದ್ದ ಕೆಂಪು/ಕುಂಕುಮ ಮತ್ತು ಹಳದಿ ಬಣ್ಣದ ಧ್ವಜವನ್ನು ಇಳಿಸಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಧ್ವಜವನ್ನು ಹಾರಿಸಿದ ದಿನವಿದು. ಈ ಐತಿಹಾಸಿಕ ಅನ್ಯಾಯದ ದಿನವಾದ ಮೇ 04 ಅನ್ನು ಕನಿಷ್ಠ ಕರ್ನಾಟಕ ಸರ್ಕಾರವಾದರೂ ‘ಕರಾಳ ದಿನ/black day’ ಎಂದು ಆಚರಿಸಬೇಕು.
1799 ಮೇ 4ರಂದು ಮಧ್ಯಾಹ್ನ ಸರಿಯಾಗಿ 1 ಗಂಟೆಗೆ ಶ್ರೀರಂಗಪಟ್ಟಣ ಕೋಟೆಗೆ ಬ್ರಿಟಿಷರು ಲಗ್ಗೆ ಹಾಕುತ್ತಾರೆ. ಸುಮಾರು 20 ವರ್ಷಗಳ ಹಿಂದೆ ಟಿಪ್ಪುವಿನಿಂದ ಬಂಧಿಸಲ್ಪಟ್ಟು, ಬ್ರಿಟಿಷರಿಗಾಗಿಯೇ ಟಿಪ್ಪು ನಿರ್ಮಿಸಿದ್ದ ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸಿ ಹೊರ ಬಂದಿದ್ದ ಬ್ರಿಟಿಷ್ ಲೆಫ್ಟಿನೆಂಟ್ ಡೇವಿಡ್ ಬೈಡನ್ ಈ ಮುತ್ತಿಗೆಯ ನೇತೃತ್ವ ವಹಿಸಿದ್ದ. ಟಿಪ್ಪು ವಿರುದ್ಧ ಹೋರಾಡಿ ಈ ಯುದ್ಧವನ್ನೂ ಗೆಲ್ಲುತ್ತೇವೆ ಎಂಬ ನಿರೀಕ್ಷೆ ಬ್ರಿಟಿಷರಿಗೆ ಇರಲಿಲ್ಲ. ಹಾಗಾಗಿ ಈ ಬ್ರಿಟಿಷ್ ಸೇನಾ ತಂಡಕ್ಕೆ forlorn hope ಎಂದು ಕರೆಯುತ್ತಾರೆ. ಅಂದರೆ ‘ಹತಾಶ ಯೋಜನೆ’ ಎಂದರ್ಥ !.
ಬದುಕುಳಿಯುವ ಸಾಧ್ಯತೆ ಕಡಿಮೆ ಇದ್ದರೂ ಹೋರಾಡಬೇಕು ಎಂದು ನಿರ್ಧರಿಸಿಯೇ ಸೈನಿಕರನ್ನು ಬ್ರಿಟಿಷರು ಟಿಪ್ಪು ವಿರುದ್ದ ಸಿದ್ಧಗೊಳಿಸಿದ್ದರು. ಅನೇಕ ಬ್ರಿಟಿಷ್ ಸೈನಿಕರ ಬಳಿ ಬ್ರಿಟಿಷ್ ಧ್ವಜಗಳಿದ್ದವು. ‘ಯಾರು ಮೊದಲು ಬ್ರಿಟಿಷ್ ಧ್ವಜವನ್ನು ಕೋಟೆಯ ಮೇಲೆ ನೆಡುತ್ತಾನೋ ಆತನಿಗೆ ಸ್ಥಳದಲ್ಲಿ ಪದೋನ್ನತಿ (ಪ್ರಮೋಶನ್ ಅಥವಾ on the spot promotion) ನೀಡಲಾಗುವುದೆಂದು ಘೋಷಿಸಲಾಗಿತ್ತು.ಬ್ರಿಟಿಷ್ ಸೈನಿಕರು ಶ್ರೀರಂಗಪಟ್ಟಣ ಕೋಟೆಗೆ ಲಗ್ಗೆ ಹಾಕಲು ಸೇನೆ ನದಿ ದಾಟುತ್ತಿರುವಾಗ ಕೋಟೆ ಮೇಲಿಂದ ಫಿರಂಗಿ ಮತ್ತು ಬಂದೂಕಗಳಿಂದ ಗುಂಡಿನ ಸುರಿಮಳೆಯನ್ನು ಸುರಿಸಲಾಗುತ್ತದೆ. ಘನಘೋರ ಯುದ್ಧ ನಡೆಯುತ್ತದೆ. ರಕ್ತದ ನದಿಯೇ ಹರಿಯುತ್ತಿದೆಯೇನೋ ಎಂಬಂತೆ ರಕ್ತ ನೆಲದಲ್ಲಿರುತ್ತದೆ.
ಈ ಮಧ್ಯೆ ಸಾಜೆರ್ಂಟ್ ಗ್ರಾಹಾಂ ಎಂಬ ಬಾಂಬೆ ಸೇನೆಗೆ ಸೇರಿದ ಬ್ರಿಟಿಷ್ ಸೈನಿಕ ಒಂದು ಕೈಯಲ್ಲಿ ಕತ್ತಿಯನ್ನು ಮತ್ತೊಂದು ಕೈಯಲ್ಲಿ ಬ್ರಿಟಿಷ್ ಧ್ವಜವನ್ನು ಹಿಡಿದುಕೊಂಡು ಬಂದು ಶ್ರೀರಂಗಪಟ್ಟಣ ಕೋಟೆಯ ಮೇಲೆ ಬ್ರಿಟಿಷ್ ಧ್ವಜದೊಂದಿಗೆ ಧ್ವಜಸ್ಥಂಬವನ್ನು ನೆಡುತ್ತಾನೆ. ಬ್ರಿಟಿಷ್ ಧ್ವಜ ಶ್ರೀರಂಗಪಟ್ಟಣ ಕೋಟೆಯಲ್ಲಿ ಸ್ಥಾಪನೆ ಆಗುತ್ತಿದ್ದಂತೆ ಟಿಪ್ಪುವಿನ ಸೈನಿಕರು ಆತನ ಮೇಲೆ ಗುಂಡು ಹಾರಿಸುತ್ತಾರೆ. ಆತ ಕ್ಷಣಾರ್ಧದಲ್ಲಿ ನೆಲಕ್ಕುರುಳುತ್ತಾನೆ. ಆದರೆ ಆತ ನೆಟ್ಟ ಬ್ರಿಟಿಷ್ ಧ್ವಜ ಮಾತ್ರ 1947 ಆಗಸ್ಟ್ 14ರ ಮಧ್ಯರಾತ್ರಿ ತನಕ ಮೈಸೂರಿನಲ್ಲಿ ಹಾರಾಡುತ್ತಿತ್ತು.
ಬ್ರಿಟಿಷ್ ಸೇನೆಯು ‘India is ours’ (ಭಾರತ ನಮ್ಮದು) ಎಂದು ಕೂಗಿಕೊಂಡು ಶ್ರೀರಂಗಪಟ್ಟಣ ಕೋಟೆ ಒಳಕ್ಕೆ ನುಗ್ಗುತ್ತದೆ. ಎಲ್ಲೆಲ್ಲಿ ಟಿಪ್ಪು ಸೈನ್ಯದ ಕೆಂಪು/ಕುಂಕುಮ ಮತ್ತು ಹಳದಿ ಬಣ್ಣದ ದ್ವಜ ಇರುತ್ತದೆಯೋ ಅದನ್ನು ಬ್ರಿಟಿಷರು ತೆರವುಗೊಳಿಸುತ್ತಾರೆ.
ಟಿಪ್ಪುವಿಗೆ ಬ್ರಿಟಿಷ್ ಸೇನೆಯ ದಾಳಿಯ ಸಂಚಿನ ಬಗ್ಗೆ ಅನುಮಾನ ಇತ್ತು. ಹಾಗಾಗಿ ಟಿಪ್ಪು ತನ್ನ ಭವ್ಯವಾದ ಅರಮನೆಯನ್ನು ಬಿಟ್ಟು ಸೈನಿಕರ ಜೊತೆ ಸೇನಾ ಶಿಬಿರದಲ್ಲಿದ್ದರು. ಬ್ರಿಟಿಷ್ ದಾಳಿಯ ವೇಳೆ ಟಿಪ್ಪು ಸೇನಾ ಶಿಬಿರದಲ್ಲಿ ಊಟ ಮಾಡುತ್ತಿದ್ದರು. ಟಿಪ್ಪುವಿಗೆ ಕಿರುಚಾಟಗಳು ಕೇಳಿಸಿದವು. ಅಷ್ಟರಲ್ಲಿ ತನ್ನ ನಂಬಿಕಸ್ಥ ಹಾಗೂ ದಕ್ಷ ಸೇನಾಧಿಕಾರಿ ಸಯ್ಯದ್ ಸಾಹೇಬನು ಗುಂಡೇಟಿಗೆ ಬಲಿಯಾಗಿರುವ ಸುದ್ದಿ ಬರುತ್ತದೆ. ಟಿಪ್ಪು ಊಟ ಮಾಡುವುದನ್ನು ನಿಲ್ಲಿಸಿ, ಶಸ್ತ್ರಧಾರಿಯಾಗಿ ಕುದುರೆಯನ್ನೇರಿ ಕೋಟೆ ಬಿರುಕುಗೊಂಡ
ಸ್ಥಳಕ್ಕೆ ಬರುತ್ತಾರೆ. ಬ್ರಿಟಿಷ್ ಸೈನಿಕರು ಕೋಟೆಯೊಳಕ್ಕೆ ನುಗ್ಗಿ ಬರುತ್ತಿರುವುದನ್ನು ಕಂಡ ಟಿಪ್ಪು, ಕುದುರೆಯಿಂದ ಕೆಳಗಿಳಿದು ಗುಂಡು ಹಾರಿಸುತ್ತಾರೆ. ಟಿಪ್ಪು ಗುಂಡೇಟಿಗೆ ಹಲವು ಶತ್ರು ಸೈನಿಕರು ನೆಲಕ್ಕುರುಳುತ್ತಾರೆ. ಟಿಪ್ಪುವಿನ ಸೈನ್ಯವನ್ನು ಬ್ರಿಟಿಷರು ಭಾರೀ ಸಂಖ್ಯೆಯಲ್ಲಿ ಹೊಡೆದುರುಳಿಸುತ್ತಿದ್ದರು. ಅಪಾಯದ ಮುನ್ಸೂಚನೆ ಟಿಪ್ಪುವಿಗೆ ಉಂಟಾಗುತ್ತದೆ. ವಾಟರ್ ಗೇಟ್ನಿಂದ ಬ್ರಿಟಿಷರು ಒಳ ಬರುತ್ತಿರುವುದನ್ನು ಪತ್ತೆ ಹಚ್ಚಿದ ಟಿಪ್ಪು, ತಕ್ಷಣ ವಾಟರ್ ಗೇಟ್ ಬಳಿಗೆ ತೆರಳುತ್ತಾರೆ. ಶ್ರೀರಂಗಪಟ್ಟಣದ ಟಿಪ್ಪು ಕಿಲ್ಲೇದಾರ ಮೀರ್ ಸಾದಿಕ್ ಬ್ರಿಟಿಷರಿಂದ ಹಣ ಪಡೆದಿದ್ದನು. ಆದುದರಿಂದ ಅವನು ಟಿಪ್ಪು ಕೋಟೆಯಿಂದ ತಪ್ಪಿಸಿಕೊಂಡು ಹೋಗದಂತೆ ಬಾಗಿಲನ್ನು ಬಂದ್ ಮಾಡಿದ್ದರು. ಟಿಪ್ಪು ಸುಲ್ತಾನರು ‘ಬಾಗಿಲನ್ನು ತೆಗೆಯಿರಿ’ ಎಂದು ಕೂಗಿಕೊಂಡರೂ ಅವರು ಬಾಗಿಲನ್ನು ತೆರೆಯಲಿಲ್ಲ. ಈ ಗಲಾಟೆ ಮತ್ತು ಗದ್ದಲದಲ್ಲಿ ಟಿಪ್ಪು ಮೂರು ಬಾರಿ ಗಾಯಗೊಳ್ಳುತ್ತಾರೆ. ಮತ್ತೊಂದು ಗುಂಡು ಅವರ ಹೃದಯಕ್ಕೆ ತಾಕುತ್ತದೆ. ಪರಿಣಾಮವಾಗಿ ಟಿಪ್ಪು ಸುಲ್ತಾನರು ಕುಸಿದು ಬೀಳುತ್ತಾರೆ. ಮತ್ತೆ ಅವರು ಎದ್ದೇಳಲೇ ಇಲ್ಲ. ಆತನ ಆಪ್ತ ಸೇವಕ ಟಿಪ್ಪು ಸುಲ್ತಾನರನ್ನು ಪಲ್ಲಕ್ಕಿಯಲ್ಲಿಟ್ಟು ಬೇರೆ ಕಡೆಗೆ ಸಾಗಿಸಲು ಯತ್ನಿಸುತ್ತಾನೆ. ಆದರೆ ದಾರಿಯಲ್ಲಿ ಗಾಯಗೊಂಡವರ ಹಾಗೂ ಸತ್ತ ಸೈನಿಕರ ಶವಗಳ ರಾಶಿ ಇದ್ದುದರಿಂದ ಆತ ಟಿಪ್ಪು ಸುಲ್ತಾನರ ದೇಹವನ್ನು ಬೇರೆ ಕಡೆ ಸಾಗಿಸಲಾಗಲಿಲ್ಲ. ಆ ವೇಳೆಗಾಗಲೆ ಕತ್ತಲೆಯಾಗುತ್ತಿತ್ತು. ಬ್ರಿಟಿಷ್ ಸೈನಿಕರು ಯುದ್ಧದಲ್ಲಿ ಜಯಗೊಂಡಿರುವುದಾಗಿ ವಿಜಯೋತ್ಸವವನ್ನು ಆಚರಿಸಿದರು.
ಮೇಜರ್ ಅಲ್ಲನ್ ಶಾಂತಿ ಧ್ವಜವನ್ನು ಕತ್ತಿಯ ತುದಿಗೆ ಸಿಕ್ಕಿಸಿಕೊಂಡು ಅರಮನೆ ಹತ್ತಿರ ಬರುತ್ತಾನೆ. ‘ಆರಮನೆ ಒಳಗೆ ಇರುವವರಿಗೆ ಅಪಾಯ ಮಾಡುವುದಿಲ್ಲ. ಎಲ್ಲರೂ ಕೂಡಲೆ ಹೊರಗೆ ಬಂದು ಶರಣಾಗಬೇಕು’ ಎಂದು ತಿಳಿಸುತ್ತಾನೆ. ಟಿಪ್ಪುವಿನ ಕುಟುಂಬಸ್ಥರು ಅರಮನೆ ಮುಂದೆ ಹಾಸಿದ್ದ ನೆಲಕಂಬಳಿ ಮೇಲೆ ಆಸೀನರಾಗುತ್ತಾರೆ. ಟಿಪ್ಪು ಸತ್ತಿರುವುದನ್ನು ನಂಬದ ಮೇಜರ್ ಅಲ್ಲನ್ ಟಿಪ್ಪು ಬಹುಶಃ ಆರಮನೆಯಲ್ಲಿ ಅಡಗಿಕೊಂಡಿರಬಹುದೆಂದು ಭಾವಿಸಿ ಅರಮನೆಯನ್ನು ಶೋಧಿಸುತ್ತಾನೆ. ಅಲ್ಲಿ ಟಿಪ್ಪು ಕಂಡುಬರಲಿಲ್ಲ. ಯುದ್ಧರಂಗಕ್ಕೆ ಬಂದು ಟಿಪ್ಪುವಿನ ಶವದ ಗುರುತು ಪತ್ತೆ ಹಚ್ಚಲು ಕುಟುಂಬಸ್ಥರಿಗೆ ಬ್ರಿಟಿಷರು ಸೂಚಿಸುತ್ತಾರೆ. ಹೆಣದ ರಾಶಿಯಲ್ಲಿ ಟಿಪ್ಪುವಿನ ಶವದ ಗುರುತು ಪತ್ತೆ ಹಚ್ಚಲಾಗುತ್ತದೆ. ರಣರಂಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ಸ್ವಾತಂತ್ರ್ಯ ಯೋಧ ಟಿಪ್ಪು ಸುಲ್ತಾನ್ ಮಡಿದಿದ್ದರು!

