ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್ಐಟಿ) ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ 13,712 ಪುಟಗಳ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಚುನಾವಣೆ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣದಲ್ಲಿ ಒಟ್ಟು 52 ಆರೋಪಿಗಳ ಹೆಸರು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖವಾಗಿದ್ದು, ಅವರಲ್ಲಿ 39 ಜನರ ವಿರುದ್ಧ ಆರೋಪಗಳನ್ನು ದೃಢಪಡಿಸಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಅಶ್ಲೀಲ ವಿಡಿಯೋ ಹಂಚಿಕೆಗಾಗಿ ಆರೋಪಿಗಳು ಸುಮಾರು 70 ಪೆನ್ಡ್ರೈವ್ಗಳನ್ನು ಖರೀದಿಸಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪೆನ್ಡ್ರೈವ್ಗಳನ್ನು ಹಾಸನದಲ್ಲೇ ಖರೀದಿಸಿದ್ದ ಮಾಹಿತಿ ಕೂಡ ಪತ್ತೆಯಾಗಿದೆ. ವಿಚಾರಣೆ ವೇಳೆ 277 ಜನ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿರುವುದಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ನವೀನ್ ಪ್ರಮುಖ ಆರೋಪಿಯಾಗಿದ್ದು, ಪ್ರಜ್ವಲ್ ರೇವಣ್ಣ ಕಾರು ಚಾಲಕ ಕಾರ್ತಿಕ ಎರಡನೇ ಆರೋಪಿ. ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು 8 ನೇ ಆರೋಪಿಯನ್ನಾಗಿ ಮಾಡಲಾಗಿದೆ.
ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿರುವ ಆರೋಪಿಗಳಲ್ಲಿ ಹಲವರು ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.
ಕೆಲವರ ಹೆಸರು ಕೈಬಿಟ್ಟ ಎಸ್ಐಟಿ–ಆಕ್ಷೇಪ:
ಪ್ರಕರಣ ಸಂಬಂಧ ದೋಷಾರೋಪಣೆ ಪಟ್ಟಿ ಸಲ್ಲಿಸಿರುವ ಎಸ್ಐಟಿ ಕೆಲವರ ಹೆಸರನ್ನು ಕೈಬಿಟ್ಟಿದೆ ಎಂದು ದೂರುದಾರ ಪೂರ್ಣಚಂದ್ರ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಕಿಂಗ್ಪಿನ್ ಯಾರು ಎಂಬುದು ಬಹಿರಂಗವಾಗಬೇಕು. ಪ್ರಕರಣದ ಸೂತ್ರಧಾರರನ್ನು ಪತ್ತೆ ಹಚ್ಚಿ ಜನರ ಮುಂದೆ ತರಬೇಕು ಎಂದು ಆಗ್ರಹಿಸಿದರು.
ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ಸಂಚು ರೂಪಿಸಿ ರಸ್ತೆ ರಸ್ತೆಗಳಲ್ಲಿ ಪೆನ್ಡ್ರೈವ್ ಹಂಚಿಕೆ ಮಾಡಲಾಗಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದರ ಆಧಾರದಲ್ಲಿ ಎಸ್ಐಟಿ ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಿರುವುದನ್ನು ಅವರು ಸ್ವಾಗತಿಸಿದರು.
ದೂರಿನಲ್ಲಿ ಉಲ್ಲೇಖಿಸಿದ್ದ ಕೆಲವರ ಹೆಸರನ್ನು ಚಾರ್ಜ್ಶೀಟ್ನಲ್ಲಿ ಕೈಬಿಟ್ಟಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಇನ್ನಷ್ಟು ಆಳವಾದ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣೆ ಪಟ್ಟಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
39 ಆರೋಪಿಗಳಿಗೆ ಶಿಕ್ಷೆಯಾಗಲಿದೆ. ಆದರೆ ಪ್ರಭಾವಿ ವ್ಯಕ್ತಿಗಳ ಹೆಸರೂ ಹೊರಬರಬೇಕು. ಯಾವುದೇ ಒತ್ತಡಕ್ಕೂ ಒಳಗಾಗದೇ ತನಿಖೆ ಪೂರ್ಣಗೊಳ್ಳಬೇಕು. ಈ ಬಗ್ಗೆ ನ್ಯಾಯಾಲಯದಲ್ಲಿ ಸಾಕ್ಷಿ ನೀಡಲಾಗುವುದು. ಸಾಕ್ಷಿದಾರರಿಗೆ ಸರ್ಕಾರ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳ ವಿರುದ್ಧ ಹೈಕೋರ್ಟ್ನಲ್ಲಿ ಅರ್ಜಿ: ದೇವರಾಜೇಗೌಡ
ತಮ್ಮನ್ನು ಅನ್ಯಾಯವಾಗಿ ಆರೋಪಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿರುವ ವಿಚಾರವಾಗಿದ್ದು, ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದ ಪ್ರಕರಣ ಇದಾಗಿದೆ ಎಂದು ಪ್ರಕರಣದ ಆರೋಪಿಯೂ ಆಗಿರುವ ಬಿಜೆಪಿ ಮುಖಂಡ ದೇವರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಮೊದಲನೇಯವರಾಗಿದ್ದರು. ಖಾಸಗಿ ಚಾನೆಲ್ಗೆ ಪೆನ್ಡ್ರೈವ್ ಹೇಗೆ ತಲುಪಿತು ಎಂಬುದರ ಕುರಿತು ಯಾರೂ ಪ್ರಶ್ನಿಸಿಲ್ಲ. ಹಾಸನದಲ್ಲಿ ಪೆನ್ಡ್ರೈವ್ ತಯಾರಿ ಹಾಗೂ ಹಂಚಿಕೆ ಬಗ್ಗೆ ಎಲ್.ಆರ್. ಶಿವರಾಮೇಗೌಡ ಮಾತನಾಡಿದ ಆಡಿಯೋ ವೈರಲ್ ಆಗಿದ್ದರೂ, ತನಿಖೆಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದ್ದರೂ, ಒಂದು ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನ ನಡೆದಿದೆ. ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ಮುಂದೆ ತಲೆಬಾಗಬೇಕು, ಶಿಕ್ಷೆ ಅನುಭವಿಸಬೇಕು ಎಂದರು. ನನ್ನಿಂದ ಯಾರಿಗೂ ಪೆನ್ಡ್ರೈವ್ ಅಥವಾ ವಿಡಿಯೋ ಹೋಗಿದ್ದರೆ ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ. ನನ್ನ ಮೊಬೈಲ್ ಮತ್ತು ಕಂಪ್ಯೂಟರ್ ವಶಕ್ಕೆ ಪಡೆದಿದ್ದು, ಅದರಲ್ಲಿ ಏನನ್ನಾದರೂ ಸೇರಿಸುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ಕಾರ್ತಿಕ್ ಗೌಡ ಕಿಂಗ್ಪಿನ್. ಪ್ರಮುಖ ಆರೋಪಿಗಳ ಪಟ್ಟಿಯಲ್ಲಿ ಪ್ರೀತಂ ಗೌಡ ಸೇರಿದಂತೆ ಕೆಲವರ ಹೆಸರುಗಳು ಕಾಣೆಯಾಗಿವೆ. ಹೋಟೆಲ್ ಅಶೋಕದಲ್ಲಿ ಪೆನ್ಡ್ರೈವ್ ಹಂಚಿಕೆ ನಡೆದ ಮಾಹಿತಿ ಇದ್ದರೂ, ಆ ಸ್ಥಳವನ್ನು ಕಸ್ಟಡಿಗೆ ಪಡೆಯಲಿಲ್ಲ. , ಸಂಸದ ಶ್ರೇಯಸ್ ಪಟೇಲ್ ಅವರಿಗೆ ನೋಟಿಸ್ ನೀಡದಿರುವುದು, ಅಂದಿನ ಎಸ್ಪಿ ಮೊಹಮ್ಮದ್ ಸುಜೀತಾ ಅವರ ಪಾತ್ರದ ಕುರಿತು ತನಿಖೆ ನಡೆಸದಿರುವುದು ಸೇರಿದಂತೆ ಹಲವು ಅಂಶಗಳನ್ನು ಪ್ರಶ್ನಿಸಿದರು.
ತನಿಖೆ ನಡೆಸಿದ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಪ್ರಭಾವದಲ್ಲಿ ಕೆಲಸ ಮಾಡಿದ್ದಾರೆ. ನಿಜವಾಗಿ ಪೆನ್ಡ್ರೈವ್ ಹಂಚಿಕೆ ಮಾಡಿದವರ ಹೆಸರು ಚಾರ್ಜ್ಶೀಟ್ನಲ್ಲಿ ಇಲ್ಲ. ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧವೇ ತನಿಖೆ ನಡೆಸುವಂತೆ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸುವುದಾಗಿ ದೇವರಾಜೇಗೌಡ ತಿಳಿಸಿದರು.

