ಹಾಸನ: ಜಿಲ್ಲೆಯ ಹೇಮಾವತಿ ಜಲಾಶಯ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗೆ ಕಿತ್ತಾಟ ಶುರುವಾಗಿದೆ. ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ನೇಮಕವಾಗಿದ್ದು, ಕುರ್ಚಿಗಾಗಿ ಜಟಾಪಟಿ ನಡೆಸಿರುವುದರಿಂದ, ಜನರು ಪರದಾಡುವಂತಾಗಿದೆ.
ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಯಲ್ಲಿದ್ದ ಮಂಜುನಾಥ್ ಎಂಬವರನ್ನು ವರ್ಗಾವಣೆ ಮಾಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿದ್ದ ಮಹೇಶ್ ಪಿ.ಎಸ್. ಎಂಬವರನ್ನು ಹೇಮಾವತಿ ಜಲಾಶಯ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಏಪ್ರಿಲ್ 24ರಂದು ನೇಮಕ ಮಾಡಿ ಆದೇಶಿಸಿದೆ. ಆದರೆ ಮೊದಲಿದ್ದ ಮಂಜುನಾಥ್ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಮೊರೆ ಹೋಗುವ ಮೂಲಕ ಮತ್ತೆ ಅದೇ ಹುದ್ದೆಗೆ ವಾಪಸ್ ಬಂದಿದ್ದಾರೆ. ಇದು ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ಏರ್ಪಡುವಂತೆ ಮಾಡಿದೆ.
ಅಧಿಕಾರಿಗಳ ನಡುವೆ ಆರೋಪ, ಪ್ರತ್ಯಾರೋಪ: ಹಿಂದೆ ಇದ್ದ ಅಧಿಕಾರಿ ಕೆಎಟಿ ಮೂಲಕ ವಾಪಸ್ ಬಂದಿರುವುದು ನನಗೆ ಗೊತ್ತಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ 23.4.2026ರ ಅಧಿಸೂಚನೆಯಂತೆ ನನ್ನನ್ನು ಹೇಮಾವತಿ ಜಲಾಶಯದ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅದರಂತೆ ನಾನು ಮರುದಿನ ಮಧ್ಯಾಹ್ನ ಜಿಲ್ಲಾಧಿಕಾರಿ ಅವರಿಗೆ ವರದಿ ಮಾಡಿ, ಇಲ್ಲಿಗೆ ಬಂದಿದ್ದೇನೆ. ಚಾರ್ಜ್ ತೆಗೆದುಕೊಂಡ ನಂತರ ನಿನ್ನೆ ಕೂಡ ಕೆಲಸ ಮಾಡಿದ್ದೇನೆ ಎಂದು ಮಹೇಶ್ ಪಿ.ಎಸ್. ತಿಳಿಸಿದ್ದಾರೆ.
ಆದರೆ ನಿನ್ನೆ ಮಂಜುನಾಥ್ ಅವರು ಕೆಎಟಿ ಆದೇಶವನ್ನು ಹಿಡಿದುಕೊಂಡು ಬಂದು ರಿಪೋರ್ಟ್ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸ್ಪಷ್ಟನೆ ತೆಗೆದುಕೊಂಡು ನಾವು ಮುಂದುವರೆಯುತ್ತೇನೆ ಎಂದು ಮಹೇಶ್ ಪ್ರತಿಕ್ರಿಯಿಸಿದ್ದಾರೆ.
ಮಂಜುನಾಥ್ ಮಾತನಾಡಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿದ್ದ ಮಹೇಶ್ ಪಿ.ಎಸ್. ಅವರು ಮೀಡಿಯೇಟರ್ ಲಾಬಿ ಮೂಲಕ ಇಲ್ಲಿಗೆ ವರ್ಗಾವಣೆ ಮಾಡಿಕೊಂಡು ಬಂದಿದ್ದಾರೆ. ನನ್ನದು ಇಲ್ಲಿ ಇನ್ನೊಂದು ವರ್ಷ ಮಾತ್ರ ಸೇವಾವಧಿ ಬಾಕಿಯಿದೆ. ನಾನು ಈಗಾಗಲೇ ಒಂದು ವರ್ಷ ಮುಂದುವರೆಸುವಂತೆ ಮನವಿ ಮಾಡಿದ್ದೆ. ಕೆಎಟಿ ನನ್ನನ್ನೇ ಮುಂದುವರೆಸುವಂತೆ ಆದೇಶ ಮಾಡಿದೆ. ನಿನ್ನೆಯೇ ನಾನು ಬಂದು ವರದಿ ಮಾಡಿರುವುದಾಗಿ, ಸರ್ಕಾರಕ್ಕೆ, ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳಿಗೂ ಕಳುಹಿಸಿದ್ದೇನೆ. ಆದರೆ ಆದೇಶದನ್ವಯ ಮಹೇಶ್ ಅವರು ಅಧಿಕಾರವನ್ನು ಮತ್ತೆ ನನಗೆ ಹಸ್ತಾಂತರಿಸದೆ ಮುಂದುವರೆದಿದ್ದಾರೆ. ಇದು ನ್ಯಾಯಾಲಯದ ಉಲ್ಲಂಘನೆ ಆಗುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಾರ್ವಜನಿಕರ ಪರದಾಟ: ಇಲಾಖೆಗೆ ಬರುವ ಸಾರ್ವಜನಿಕರಿಗೆ ಇವರಿಬ್ಬರಲ್ಲಿ, ತಮ್ಮ ತಮ್ಮ ದಾಖಲಾತಿಗಳಿಗೆ ಯಾರ ಸಹಿಯನ್ನು ಪಡೆಯಬೇಕು ಎಂಬುದೇ ತಲೆನೋವಾಗಿದೆ. ಆದರೆ ಸಾರ್ವಜನಿಕರು ಹೇಳುವ ಪ್ರಕಾರ ಸರ್ಕಾರ ಆದೇಶ ಮಾಡಿದೆ. ಆದರೆ ಹಿಂದೆ ಇದ್ದ ಅಧಿಕಾರಿಯು ಕೆಎಟಿ ಮೂಲಕ ಆದೇಶ ತಂದಿದ್ದಾರೆ. ಇವರಿಬ್ಬರ ಸಮಸ್ಯೆಯನ್ನು ಈಗ ಜಿಲ್ಲಾಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ಕೂಡಲೇ ಸಾರ್ವಜನಿಕರಿಗೆ ಗೊಂದಲವಾಗದಂತೆ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ
ಹೇಮಾವತಿ ಜಲಾಶಯ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗೆ ಕಿತ್ತಾಟ
15
previous post

