ಸಕಲೇಶಪುರ: ತಾಲ್ಲೂಕಿನ ಎಡಕುಮೇರಿ ಮತ್ತು ಶಿರಬಾಗಿಲು ರೈಲು ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಹಳಿ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರೊಬ್ಬರಿಗೆ ರೈಲು ಡಿಕ್ಕಿ ಹೊಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಮೂಲತಃ ಉತ್ತರ ಭಾರತದವರಾದ ಸಚಿನ್ (34) ಗಾಯಗೊಂಡ ಕಾರ್ಮಿಕ. ಎಡಕುಮೇರಿ-ಶಿರಬಾಗಿಲು ನಡುವಿನ ದುರ್ಗಮ ಹಾದಿಯಲ್ಲಿ ರೈಲ್ವೆ ಹಳಿಗಳ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ಹಳಿಯ ಮೇಲೆ ಕೆಲಸ ಮಾಡುತ್ತಿದ್ದ ಸಚಿನ್ ಅವರಿಗೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಸಹ ಕಾರ್ಮಿಕರು ತಕ್ಷಣವೇ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ತೀವ್ರ ಗಾಯ: ಡಿಕ್ಕಿಯ ರಭಸಕ್ಕೆ ಸಚಿನ್ ಅವರ ಎದೆ, ತಲೆ ಹಾಗೂ ಮುಖದ ಭಾಗಕ್ಕೆ ಗಂಭೀರ ಸ್ವರೂಪದ ಪೆಟ್ಟಾಗಿದೆ. ಘಟನೆಯ ಬೆನ್ನಲ್ಲೇ ಅವರನ್ನು ಸಕಲೇಶಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪೊಲೀಸರ ಭೇಟಿ: ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪಶ್ಚಿಮ ಘಟ್ಟದ ಈ ಭಾಗದಲ್ಲಿ ಹಳಿ ಕಾಮಗಾರಿ ನಡೆಸುವಾಗ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತೊಮ್ಮೆ ಚರ್ಚೆಗಳು ಆರಂಭವಾಗಿವೆ.
11
previous post

