ಹಾಸನ: ಸ್ವಾಮಿ ವಿವೇಕಾನಂದರು ನುಡಿದಂತೆ ನಡೆದು ತೋರಿಸಿದ ಮಹಾನ್ ಚೇತನ, ಭಾರತದ ಸನಾತನ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಸಾರಿದ ವೀರ ಸನ್ಯಾಸಿಯಾಗಿದ್ದಾರೆ ಅವರ ಜೀವನದ ಒಂದೊAದು ಪ್ರಸಂಗಗಳೇ ಇಂದಿನ ಯುವ ಪೀಳಿಗೆಯ ನಿತ್ಯ ಜೀವನಕ್ಕೆ ದಾರಿದೀಪವಾಗಿದ್ದಾರೆ ಎಂದು ಹಾಸನ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಬಾಬು ಅವರು ತಿಳಿಸಿದ್ದಾರೆ.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕಾನಂದರ ೧೬೩ ನೇ ಜನ್ಮ ದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಆದರ್ಶಗಳ ಜೊತೆಗೆ ಆಯುರ್ವೇದ ಮತ್ತು ಯೋಗದ ಮೂಲಕ ಆರೋಗ್ಯಕರ ಜೀವನಶೈಲಿ ಮತ್ತು ಸಾರ್ಥಕ ಜೀವನದ ಸಂದೇಶಗಳನ್ನು ಅರಿತುಕೊಳ್ಳಬೇಕು ಎಂದರು.
ಗುರಿಯ ಮುಟ್ಟುವ ತನಕ ನಿಲ್ಲದಿರಿ ಎಂದು ಕರೆ ಕೊಟ್ಟವರು ಸ್ವಾಮಿ ವಿವೇಕಾನಂದರು. ಯುವಜನತೆಯಲ್ಲಿ ರಾಷ್ಟ್ರ ಕಟ್ಟುವಂತಹ ಶಕ್ತಿ ಇದೆ ಎಂದು ನಮಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.
ಪ್ರಪಂಚಕ್ಕೆ ಭಾರತೀಯ ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ತಿಳಿ ಹೇಳುವ ಕಾರ್ಯ ಮಾಡಿದ್ದಾರೆ ಹಾಗೂ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಯುವ ಪೀಳಿಗೆ ಓದಿ ತಿಳಿಯಬೇಕು ಎಂದು ತಿಳಿಸಿದರು.
ಖಜಾನೆಯ ಉಪನಿರ್ದೇಶಕರಾದ ವಿಜೇಂದ್ರ ಎ ಜಿ ಅವರು ಮಾತನಾಡಿ ಅರಿಸ್ಟಾಟಲ್ ಅವರಷ್ಟೇ ಸಮನಾದ ಗಣ್ಯ ವ್ಯಕ್ತಿ ಎಂದರೆ ಅದು ಸ್ವಾಮಿ ವಿವೇಕಾನಂದರು ಇವರು ಭಾರತದಲ್ಲಿದ್ದಂತಹ ಕಂದಾಚಾರವನ್ನು ಹೋಗಲಾಡಿಸಲು ಚಿಂತನೆಯನ್ನು ಮಾಡಿದವರು ಎಂದರು.
ಸ್ವಾಮಿ ವಿವೇಕಾನಂದರವರ ವೇಷ ಭೂಷಣ ತುಂಬಾ ಗಮನಾರ್ಹವಾದದ್ದು. ಪ್ರಪಂಚದ ಪಾಂಡಿತ್ಯದ ಜೊತೆಗೆ ಮಾತಿನ ಚಾತುರ್ಯತೆಯನ್ನು ಬಲ್ಲವರಾಗಿದ್ದರು. ಚಾರೀತ್ಯಾವನ್ನು ಚೆನ್ನಾಗಿ ಇಟ್ಟಿಕೊಳ್ಳಬೇಕು, ಶಾಂತಿಗಾಗಿ ಯುವ ಜನತೆ ತುಂಬಾ ಮುಖ್ಯ, ಸ್ವಾಮಿ ವಿವೇಕಾನಂದರು ಯುವ ಜನತೆಯ ಕಡೆಗೆ ಹೆಚ್ಚು ಒಲವನ್ನು ಹೊಂದಿದ್ದರು ಎಂದು ತಿಳಿಸಿದರು.
ವಿವೇಕಾನಂದರ ಆಶಯವೇ ಸದೃಢ ಭಾವನೆ, ಸದೃಢ ಯುವ ಜನತೆಯಿಂದ ನಾವು ದೇಶ ಕಟ್ಟಬಹುದು ಎಂಬುದಾಗಿದೆ. ಸಮಾಜದ ದೀನ ದುರ್ಬಲರಿಗೆ ಸಹಾಯಕ್ಕಾಗಿ ಅವರ ಗುರುಗಳಾದ ರಾಮಕೃಷ್ಣ ಪರಮಹಂಸ ರವರ ಮರಣದ ನಂತರ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು.
ಎಸ್.ಡಿ.ಎಂ.ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಶೈಲಜಾ.ಯು ಅಧ್ಯಕ್ಷತೆ ವಹಿಸಿ ಮಾತನಾಡಿ ಕೇವಲ ಸ್ವಾಮಿ ವಿವೇಕಾನಂದರ ವಿಷಯ ಅರಿತರೆ ಸಾಲದು. ಅವರ ಸಂದೇಶಗಳು ನಮ್ಮ ಜೀವನದ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸದೃಢ ದೇಹ, ನಿಶ್ಚಲ ಮನಸ್ಸು ಹಾಗು ಬೃಹತ್ ಹೊಂಗನಸುಗಳನ್ನು ಹೊತ್ತು ರಾಷ್ಟ್ರಪ್ರೇಮದ ಭಾವದಿಂದ ಮುನ್ನಡೆದರೆ ಸದೃಢ ಭಾರತ ವಿಶ್ವಗುರು ಎಂದು ಮತ್ತೊಮ್ಮೆ ಸಾಬೀತಾಗುವುದು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಆನಂದಮೂರ್ತಿ.ಜಿ.ಡಿ ಮಾತನಾಡಿ ನಿರಂತರವಾದ ಕಾರ್ಯ ಚಟುವಟಿಕೆಗಳನ್ನು ಯುವಕರಿಗಾಗಿ ಕಾರ್ಯರೂಪಗೊಳಿಸಿರುವಂತಹ ಸಂದೇಶವನ್ನು ಅವರಲ್ಲಿ ಕಾಣುತ್ತೇವೆ. ಇಡೀ ರಾಷ್ಟ್ರಕ್ಕೆ ಮಾದರಿ ಆಗಿರುವಂತಹ ವ್ಯಕ್ತಿತ್ವವನ್ನು ರೂಪಗೊಳಿಸಿದ್ದಾರೆ ಎಂದರು.
ಸ್ವಾಮಿ ವಿವೇಕಾನಂದರು ಭಾರತದ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಸಾರಿದ್ದಾರೆ ಆಧ್ಯಾತ್ಮಿಕ ಜೀವನಕ್ಕೆ ಹೆಚ್ಚಿನ ರೀತಿಯಲ್ಲಿ ಮನ್ನಣೆ ನೀಡುತ್ತಾರೆ. ಆಧ್ಯಾತ್ಮಿಕತೆ ಹೆಸರಿನಲ್ಲಿ ರಾಮಕೃಷ್ಣ ಮಿಷನ್ ಎಂಬುದನ್ನು ಕೂಡ ಪ್ರಾರಂಭಿಸಿ ದೇಶದ ಭಕ್ತಿಯನ್ನು ಹೆಚ್ಚಿಸಿದವರು ಎಂದರು.
ಸ್ವಾಮಿ ವಿವೇಕಾನಂದ ಎಂದಾಕ್ಷಣ ಸರ್ವ ಧರ್ಮ ಸಮ್ಮೇಳನ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುವ ಅವರ ನುಡಿಗಳು ನೆನಪಾಗುತ್ತಿವೆ ಎಂದರು.
ಈ ಸಂದರ್ಭದಲ್ಲಿ ನಡೆಸಿದ್ದ ಪ್ರಬಂಧ, ಭಾಷಣ ಮತ್ತು ಭಿತ್ತಿಪತ್ರ ರಚನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಎಸ್.ಡಿ.ಎಂ ಆಯುರ್ವೇದ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ.ಪ್ರಸನ್ನ ನರಸಿಂಹರಾವ್, ಕಲಾವಿದರಾದ. ಬಿ.ಟಿ.ಮಾನವ, ಉಪ ಪ್ರಾಂಶುಪಾಲರಾದ ಡಾ.ಪ್ರಕಾಶ್.ಎಲ್.ಹೆಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

