Home ಕೃಷಿ ಹಾಸನ ಆಕಾಶವಾಣಿಯಲ್ಲಿ “ತೆಂಗಿನ-ತೇರು” ನೂತನ ಮಾಲಿಕೆ ಪ್ರಸಾರ

ಹಾಸನ ಆಕಾಶವಾಣಿಯಲ್ಲಿ “ತೆಂಗಿನ-ತೇರು” ನೂತನ ಮಾಲಿಕೆ ಪ್ರಸಾರ

by Editor

– ಮಾ.14ರಿಂದ 13 ಸಂಚಿಕೆಗಳಲ್ಲಿ ಕಾರ್ಯಕ್ರಮ ಪ್ರಸಾರ

 

ಹಾಸನ : ಜಿಲ್ಲೆಯ ರೈತರ ಅಭಿವೃದ್ಧಿಗೆ ಪೂರಕವಾಗಿ ಕೃಷಿ ಸಂಬಂಧಿತ ಮಾಹಿತಿ ನೀಡುತ್ತಿರುವ ಹಾಸನ ಆಕಾಶವಾಣಿ ಇದೀಗ “ತೆಂಗಿನ-ತೇರು” ಎಂಬ ಸಮಗ್ರ ತೆಂಗಿನ ಬೆಳೆಯ ಕುರಿತು ಮಾಹಿತಿ ನೀಡುವ ಬಾನುಲಿ ಸರಣಿಯನ್ನು ಪ್ರಾರಂಭಿಸುತ್ತಿದೆ.

ಈ ಸರಣಿ ಕಾರ್ಯಕ್ರಮ 13 ಸಂಚಿಕೆಗಳಲ್ಲಿ ಮೂಡಿ ಬರಲಿದ್ದು ಮಾರ್ಚ್ ತಿಂಗಳ 14ನೇ ತಾರೀಖಿನಿಂದ ಪ್ರತಿ ಶನಿವಾರ ಸಂಜೆ ಕೃಷಿರಂಗ – ಕಿಸಾನ್‌ವಾಣಿ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ. ಪ್ರಸ್ತುತ ಸರಣಿಯಲ್ಲಿ ತೆಂಗಿನ ಬೆಳೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಹಾಸನ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರು ಆದ ಸುಜಾತ ಎಫ್. ತಳವಾರ್ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಹೆಚ್ ಆರ್ ಯೋಗೇಶ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಸನ ಜಿಲ್ಲೆ ತೆಂಗು ಬೆಳೆಯುವ ಪ್ರಮುಖ ಜಿಲ್ಲೆಯಾಗಿದ್ದು ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ತೆಂಗಿನ ವಿಸ್ತೀರ್ಣವಿರುವ ಜಿಲ್ಲೆಗಳಲ್ಲಿ ಎರಡನೆಯದ್ದಾಗಿದ್ದು, ಹವಾಮಾನ ಬದಲಾವಣೆಯಾದ ಈ ಹೊತ್ತಿನಲ್ಲಿ ತೆಂಗಿನ ಬೆಳೆ ಅನೇಕ ರೋಗ ಹಾಗೂ ಕೀಟಗಳಿಗೆ ತುತ್ತಾಗಿದ್ದು ತೆಂಗಿನ ಬೆಳೆಗಾರರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ ಈ ಅನಾನುಕೂಲವನ್ನು ತಪ್ಪಿಸುವ ಸಲುವಾಗಿ ತೆಂಗಿನ ಬೆಳೆಗಾರರಿಗೆ ಸೂಕ್ತ ಮಾಹಿತಿಯನ್ನು ನೀಡಿ ತೆಂಗಿನ ಬೆಳೆಗಾರರ ಆರ್ಥಿಕ ಸಬಲೀಕರಣಕ್ಕೆ ನೆರವಾಗುವ ಸಲುವಾಗಿ ಹಾಸನ ಜಿಲ್ಲೆಯ ತೋಟಗಾರಿಕೆ ಇಲಾಖೆ ಹಾಗೂ ಹಾಸನ ಆಕಾಶವಾಣಿ ಕೇಂದ್ರದ ಸಹಯೋಗದಲ್ಲಿ “ತೆಂಗಿನ- ತೇರು” ಎಂಬ ತೆಂಗಿನ ಬೆಳೆ ಕುರಿತು ಸಮಗ್ರ ಮಾಹಿತಿ ನೀಡುವ ವಿನೂತನ ಸರಣಿಯನ್ನು ಪ್ರಾರಂಭಿಸಲಾಗುತ್ತಿದೆ.

ಹಾಸನ ಆಕಾಶವಾಣಿ ಕೇಂದ್ರ ತನ್ನದೇ ಆದ ಶ್ರೋತೃಗಣವನ್ನು ಹೊಂದಿದ್ದು ಹಾಸನ, ತುಮಕೂರು, ಮೈಸೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಲಕ್ಷಾಂತರ ತೆಂಗಿನ ಬೆಳೆಗಾರರಿಗೆ ತೆಂಗಿನ ತೇರು ಸರಣಿ ಕಾರ್ಯಕ್ರಮದಿಂದ ಸೂಕ್ತ ಮಾಹಿತಿ ದೊರೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಹೆಚ್ ಆರ್ ಯೋಗೇಶ್ ಅವರು ತಿಳಿಸಿದ್ದಾರೆ.

ಈ ಸರಣಿಯಲ್ಲಿ ತೆಂಗಿನ ಬೆಳೆಯ ಮಹತ್ವ, ತೆಂಗಿನ ಬೆಳೆಯ ಬೇಸಾಯದ ಕ್ರಮಗಳು, ತೆಂಗಿನ ವಿವಿಧ ತಳಿಗಳು, ತೆಂಗಿನ ಸಸ್ಯ ಸಂರಕ್ಷಣೆ, ತೆಂಗಿನ ತೋಟಗಳಲ್ಲಿ ಪೋಷಕಾಂಶ ಹಾಗೂ ನೀರಿನ ನಿರ್ವಹಣೆ, ತೆಂಗಿನ ತ್ಯಾಜ್ಯದ ಸದ್ಭಳಕೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯನ್ನು ಕುರಿತು ಸಮಗ್ರ ಮಾಹಿತಿಯನ್ನು ತೆಂಗಿನ ಕುರಿತು ಸಂಶೋಧನೆ ನಡೆಸಿರುವ ವಿವಿಧ ವಿಜ್ಞಾನಿಗಳು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ತೆಂಗಿನ ಬೆಳೆಯಲ್ಲಿ ಉತ್ತಮ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ತೆಂಗಿನ ಬೆಳೆಯನ್ನು ಲಾಭದಾಯಕವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರಗತಿಪರ ಕೃಷಿಕರು ಈ ಎಲ್ಲ ಸಂಗತಿಗಳನ್ನು ಕುರಿತು ಅಮೂಲ್ಯ ಮಾಹಿತಿ ಮತ್ತು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಹಾಸನ ಆಕಾಶವಾಣಿ ಕೇಂದ್ರದ ಕೃಷಿರಂಗ-ಕಿಸಾನ್‌ವಾಣಿ ವಿಭಾಗದ ಮುಖ್ಯಸ್ಥರಾದ ಅರಕಲಗೂಡು ವಿ ಮಧುಸೂಧನ್ ರವರು ತಿಳಿಸಿದ್ದಾರೆ.

ಪ್ರತಿ ಸಂಚಿಕೆಯ ಕೊನೆಯಲ್ಲಿ ತೆಂಗಿಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಲಿದ್ದು ಸರಿಯಾದ ಪ್ರಶ್ನೆಗೆ ಉತ್ತರ ತಿಳಿಸುವ ಆಯ್ದ ಕೇಳುಗರಿಗೆ ತೋಟಗಾರಿಕೆ ಇಲಾಖೆಯ ಮೂಲಕ ಸೂಕ್ತ ಬಹುಮಾನವನ್ನು ನೀಡಲಾಗುತ್ತದೆ. “ತೆಂಗಿನ-ತೇರು” ಸರಣಿ ಕಾರ್ಯಕ್ರಮ ಮಾರ್ಚ್ 14 ರಿಂದ ಪ್ರಾರಂಭವಾಗಲಿದ್ದು ಪ್ರತಿ ಶನಿವಾರ ಸಂಜೆ 6:50ಕ್ಕೆ ಹಾಸನ ಆಕಾಶವಾಣಿ ಕೇಂದ್ರದಿಂದ ಮೂಡಿಬರಲಿದೆ.

Leave a Comment