– ಧರ್ಮೇಶ್
ಜಗತ್ತಿನಾದ್ಯಂತ ದುಡಿಯುವ ವರ್ಗವು ತನ್ನ ಘನತೆ, ಹಕ್ಕುಗಳು ಮತ್ತು ಶೋಷಣೆ ಮುಕ್ತ ಸಮಾಜಕ್ಕಾಗಿ ನಡೆಸಿದ ಐತಿಹಾಸಿಕ ಹೋರಾಟದ ಸ್ಮರಣೆಯೇ ಮೇ ದಿನ ಅಥವಾ ಅಂತರರಾಷ್ಟ್ರೀಯ ಕಾರ್ಮಿಕರ ದಿನ. 2026ರ ಈ ಸಂದರ್ಭದಲ್ಲಿ ಜಾಗತಿಕ ರಾಜಕೀಯ ಬಿಕ್ಕಟ್ಟುಗಳು, ಉಲ್ಬಣಗೊಳ್ಳುತ್ತಿರುವ ಸಾಮ್ರಾಜ್ಯಶಾಹಿ ಆಕ್ರಮಣಗಳು ಮತ್ತು ಭಾರತದಂತಹ ದೇಶಗಳಲ್ಲಿ ಜಾರಿಗೆ ಬರುತ್ತಿರುವ ಕಾರ್ಮಿಕ ವಿರೋಧಿ ನೀತಿಗಳ ಹಿನ್ನೆಲೆಯಲ್ಲಿ ಈ ದಿನದ ಆಚರಣೆಯು ಕೇವಲ ಒಂದು ಸಂಪ್ರದಾಯವಾಗದೆ, ಕಾರ್ಮಿಕ ವರ್ಗದ ಅಸ್ತಿತ್ವದ ಹೋರಾಟದ ಕಿಚ್ಚಾಗಿ ಮಾರ್ಪಟ್ಟಿದೆ. ಹಾಗಾಗಿ ಈ ವರ್ಷದ ಮೇ ದಿನ ಆಚರಣೆಯು ”ಬಿಲಿಯನೇರ್ಗಳಿಗಿಂತ ಕಾರ್ಮಿಕರೇ ಮೇಲು” ಎಂಬ ಘೋಷಣೆಯೊಂದಿಗೆ ನಡೆಯುತ್ತಿದೆ.
ಮೇ ದಿನದ ಇತಿಹಾಸವು 19ನೇ ಶತಮಾನದ ಕೈಗಾರಿಕಾ ಕ್ರಾಂತಿಯ ಭೀಕರ ಶೋಷಣೆಯ ಕಥೆಯನ್ನು ಸಾರುತ್ತದೆ. ಆ ಕಾಲದಲ್ಲಿ ಕಾರ್ಮಿಕರು, ಮಹಿಳೆಯರು ಮತ್ತು ಮಕ್ಕಳು ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ಅತ್ಯಂತ ಅಪಾಯಕಾರಿ ಪರಿಸ್ಥಿತಿಗಳಲ್ಲಿ, ಅತ್ಯಲ್ಪ ವೇತನಕ್ಕೆ ದುಡಿಯಬೇಕಿತ್ತು. ಮನುಷ್ಯನ ಶ್ರಮವನ್ನು ಕೇವಲ ಒಂದು ಸರಕನ್ನಾಗಿ ನೋಡುತ್ತಿದ್ದ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಕಾರ್ಮಿಕ ವರ್ಗವು ಸಂಘಟಿತವಾಗಲು ಪ್ರಾರಂಭಿಸಿತು. ಎಂಟು ಗಂಟೆಗಳ ಕೆಲಸದ ಅವಧಿಯ ಬೇಡಿಕೆಯು ಕೇವಲ ಸಮಯದ ಬೇಡಿಕೆಯಾಗಿರದೆ, ಅದು ಕಾರ್ಮಿಕರ ವಿಶ್ರಾಂತಿ, ಶಿಕ್ಷಣ ಮತ್ತು ಕೌಟುಂಬಿಕ ಜೀವನದ ಹಕ್ಕಿನ ಸಂಕೇತವಾಗಿತ್ತು.
1884ರಲ್ಲಿ, ಅಮೆರಿಕದ ಕಾರ್ಮಿಕ ಸಂಘಟನೆಗಳ ಒಕ್ಕೂಟವು 1886ರ ಮೇ 1 ರ ಒಳಗಾಗಿ ಎಂಟು ಗಂಟೆಗಳ ಕೆಲಸದ ಅವಧಿಯನ್ನು ಜಾರಿಗೆ ತರಬೇಕೆಂದು ನಿರ್ಣಯಿಸಿತು. ಈ ಅವಧಿಯು ಮುಗಿದಾಗ, ಅಮೆರಿಕದಾದ್ಯಂತ ಲಕ್ಷಾಂತರ ಕಾರ್ಮಿಕರು ಬೀದಿಗಿಳಿದರು. ಈ ಚಳವಳಿಯ ಕೇಂದ್ರಬಿಂದು ಶಿಕಾಗೋ ನಗರವಾಗಿತ್ತು. 1886ರ ಮೇ 3ರಂದು ಮೆಕ್ಕಾರ್ಮಿಕ್ ರೀಪರ್ ವರ್ಕ್ಸ್ ಫ್ಯಾಕ್ಟರಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರ ಮೇಲೆ ಪೊಲೀಸರು ಗುಂಡು ಹಾರಿಸಿ ಇಬ್ಬರನ್ನು ಕೊಂದರು. ಈ ಹತ್ಯಾಕಾಂಡವನ್ನು ಪ್ರತಿಭಟಿಸಲು ಮೇ 4ರಂದು ಹೇ ಮಾರ್ಕೆಟ್ ಚೌಕದಲ್ಲಿ ಬೃಹತ್ ಸಭೆ ಸೇರಲಾಯಿತು. ಸಭೆಯ ಕೊನೆಯಲ್ಲಿ ಮಾಲೀಕರ ಪಿತೂರಿಯ ಭಾಗವಾಗಿ ಕಿಡಿಗೇಡಿ ಎಸೆದ ಒಂದು ಬಾಂಬ್ ಮತ್ತು ನಂತರದ ಪೊಲೀಸರ ಗುಂಡಿನ ದಾಳಿಯು ಅನೇಕ ಸಾವು-ನೋವುಗಳಿಗೆ ಕಾರಣವಾಯಿತು.
ಈ ಘಟನೆಯ ನಂತರ ಕಾರ್ಮಿಕ ವರ್ಗದ ಮೇಲೆ ಭೀಕರ ದಮನಕಾಂಡ ನಡೆಯಿತು. ಯಾವುದೇ ಪ್ರಬಲ ಸಾಕ್ಷ್ಯಾಧಾರಗಳಿಲ್ಲದಿದ್ದರೂ, ಎಂಟು ಮಂದಿ ಕಾರ್ಮಿಕ ನಾಯಕರನ್ನು ಪಿತೂರಿಯ ಆರೋಪದ ಮೇಲೆ ಬಂಧಿಸಲಾಯಿತು. ಅವರಲ್ಲಿ ಆಗಸ್ಟ್ ಸ್ಪೈಸ್, ಆಲ್ಬರ್ಟ್ ಪಾರ್ಸನ್ಸ್, ಅಡಾಲ್ಫ್ ಫಿಶರ್ ಮತ್ತು ಜಾರ್ಜ್ ಎಂಗೆಲ್ ಅವರನ್ನು ಗಲ್ಲಿಗೇರಿಸಲಾಯಿತು. 1889ರಲ್ಲಿ ಪ್ಯಾರಿಸ್ನಲ್ಲಿ ನಡೆದ ಎರಡನೇ ಕಮ್ಯೂನಿಸ್ಟ್ ಅಂತರರಾಷ್ಟ್ರೀಯದ ಸಮಾಜವಾದಿ ಕಾರ್ಮಿಕ ಸಮ್ಮೇಳನವು (ಸೆಕೆಂಡ್ ಇಂಟರ್ ನ್ಯಾಷನಲ್) ಈ ಹುತಾತ್ಮರ ನೆನಪಿಗಾಗಿ ಪ್ರತಿ ವರ್ಷ ಮೇ 1 ನ್ನು ಅಂತರರಾಷ್ಟ್ರೀಯ ಕಾರ್ಮಿಕರ ದಿನವಾಗಿ ಆಚರಿಸಲು ನಿರ್ಧರಿಸಿತು. ಭಾರತದಲ್ಲಿ ಮೊದಲ ಬಾರಿಗೆ 1923ರ ಮೇ 1ರಂದು ಮದ್ರಾಸ್ (ಚೆನ್ನೈ)ನಲ್ಲಿ ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ನೇತೃತ್ವದಲ್ಲಿ ಮಲಯಾರಂ ಸಿಂಗಾರವೇಲು ಚಟ್ಟಿಯಾರ್ ಅವರು ಕೆಂಪು ಬಾವುಟ ಹಾರಿಸುವುದರ ಮುಖಾಂತರ ಮೇ ದಿನವನ್ನು ಆಚರಿಸಲಾಯಿತು.
ವರ್ತಮಾನದಲ್ಲಿ ಮೇ ದಿನದ ಪ್ರಸ್ತುತತೆ
ಇಂದು ಅಮೆರಿಕದ ಸಾಮ್ರಾಜ್ಯಶಾಹಿಯು ಜಗತ್ತಿನಾದ್ಯಂತ ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸಲು ಕ್ರೂರ ಆಕ್ರಮಣಗಳನ್ನು ನಡೆಸುತ್ತಿದೆ. ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದಲ್ಲಿ ಅಂತರರಾಷ್ಟ್ರೀಯ ಕಾನೂನುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ತನ್ನ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯ ಮೂಲಕ ವೆನೆಜುವೆಲಾ, ಇರಾನ್ ಮತ್ತು ಕ್ಯೂಬಾದಂತಹ ರಾಷ್ಟ್ರಗಳ ಮೇಲೆ ದಾಳಿ ಮಾಡುವುದು, ಚುನಾಯಿತ ಅಧ್ಯಕ್ಷರನ್ನು ಅಪಹರಿಸುವುದು ಮತ್ತು ಆ ದೇಶಗಳ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುವುದು ಅಮೆರಿಕದ ಪ್ರಮುಖ ಗುರಿಯಾಗಿದೆ.
ಇರಾನ್ ಮೇಲೆ ನಡೆಸಲಾದ ಅನ್ಯಾಯದ ಯುದ್ಧಗಳ ನಿಜವಾದ ಉದ್ದೇಶವು ತೈಲ ಮತ್ತು ಅನಿಲ ಸಂಪನ್ಮೂಲಗಳ ಮೇಲಿನ ಹಿಡಿತ ಮತ್ತು ಅಮೆರಿಕದ ಡಾಲರ್ ಪ್ರಾಬಲ್ಯವನ್ನು ರಕ್ಷಿಸುವುದಾಗಿದೆ. 2023ರ ಹೊತ್ತಿಗೆ ಜಾಗತಿಕ ತೈಲ ವ್ಯಾಪಾರದ ಐದನೇ ಒಂದು ಭಾಗವು ಡಾಲರ್ ಅಲ್ಲದ ಕರೆನ್ಸಿಗಳಲ್ಲಿ ನಡೆದಿದೆ. ಚೀನಾ ಮತ್ತು ರಷ್ಯಾ ದೇಶಗಳ ನೇತೃತ್ವದಲ್ಲಿ ಡಾಲರ್ ಹೊರತುಪಡಿಸಿ ಇತರ ಕರೆನ್ಸಿಗಳಲ್ಲಿ (ವಿಶೇಷವಾಗಿ ಯುವಾನ್ ಮೂಲಕ) ತೈಲ ವ್ಯಾಪಾರವು ಹೆಚ್ಚಾಗುತ್ತಿದ್ದು, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕದ ಡಾಲರ್ ಪ್ರಾಬಲ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿ ಅಮೆರಿಕಕ್ಕೆ ಅಸ್ತಿತ್ವದ ಭೀತಿಯನ್ನು ಹುಟ್ಟಿಸಿದೆ.
ಜಾಗತಿಕ ರಾಜಕೀಯ ಆರ್ಥಿಕ ಪರಿಸ್ಥಿತಿಯು ಜಗತ್ತಿನ ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ಕಾರ್ಮಿಕರ ಉದ್ಯೋಗ, ವೇತನ, ವಸತಿ, ಆರೋಗ್ಯ ಮತ್ತು ಕುಟುಂಬ ನಿರ್ವಹಣೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿದೆ. ಜಾಗತಿಕವಾಗಿ ಕಾರ್ಮಿಕ ವರ್ಗದ ಮೇಲೆ ನಡೆಯುತ್ತಿರುವ ದಾಳಿಗಳು ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟನ್ನು ಪ್ರತಿಫಲಿಸುತ್ತವೆ. 2026ರ ಮೇ ದಿನದ ಸಂದರ್ಭದಲ್ಲಿ “ಬಿಲಿಯನೇರ್ಗಳಿಗಿಂತ ಕಾರ್ಮಿಕರೇ ಮೇಲು” (Workers Over Billionaires) ಎಂಬ ಘೋಷಣೆಯೊಂದಿಗೆ ಜಗತ್ತಿನಾದ್ಯಂತ ಮುಷ್ಕರಗಳು ಮತ್ತು ಪ್ರದರ್ಶನಗಳು ನಡೆಯುತ್ತಿವೆ.
ಸಮಾಜವಾದಿ ಪರ್ಯಾಯ…
ಒಂದು ಕಡೆ ಸಾಮ್ರಾಜ್ಯಶಾಹಿ ಅಮೆರಿಕವು ಗ್ರೀನ್ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವುದು, ಕ್ಯೂಬಾ ಮತ್ತು ಇರಾನ್ ದೇಶಗಳಲ್ಲಿ ಆಡಳಿತ ಬದಲಾವಣೆ ತರುವುದು ಹಾಗೂ ಹಾರ್ಮೊಜ್ ಜಲಸಂಧಿ ಮತ್ತು ಪನಾಮ ಕಾಲುವೆಯ ಮೇಲೆ ಪೂರ್ಣ ನಿಯಂತ್ರಣ ಸಾಧಿಸುವಂತಹ ಆಕ್ರಮಣಕಾರಿ ಗುರಿಗಳನ್ನು ಹೊಂದಿದೆ. ಇದಕ್ಕೆ ಪರ್ಯಾಯವಾಗಿ ಕ್ಯೂಬಾ ದೇಶವು ಅಮೆರಿಕದ ದಿಗ್ಬಂಧನದಿಂದಾಗಿ ಆಹಾರ ಮತ್ತು ಔಷಧಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದರೂ ಸಹ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯು ಜಗತ್ತಿಗೆ ಒಂದು ಪರ್ಯಾಯ ಮಾದರಿಯನ್ನು ಒದಗಿಸುತ್ತಿದೆ. ಐದು ಹೊಸ ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ನೆರವು ನೀಡುತ್ತಿದೆ.
ಸಮಾಜವಾದಿ ಚೀನಾ ಜಾಗತಿಕವಾಗಿ ಒಂದು ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಹಾಗೂ ಪರಿಸರಕ್ಕೆ ಪೂರಕವಾದ ಹಸಿರು ಇಂದನದಲ್ಲಿ ಸ್ವಾವಲಂಬನೆ ಸಾಧಿಸಿದೆ. ಜೊತೆಗೆ ಜಗತ್ತಿನ ಅತಿ ದೊಡ್ಡ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ವಿಜ್ಞಾನ ತಂತ್ರಜ್ಞಾನದ ಅವಿಷ್ಕಾರಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದ್ದು ಜನರ ಅಭ್ಯುದಯಕ್ಕಾಗಿ, ಸ್ವಾವಲಂಬನೆಗಾಗಿ ಮತ್ತು ಜೀವ ಜಗತ್ತಿನ ಅನುಕೂಲಕ್ಕಾಗಿ ಬಳಸುತ್ತಿದೆ.
ಭಾರತದ ಕಾರ್ಮಿಕ ಸಂಹಿತೆಗಳು: ಕಾರ್ಮಿಕರ ಹಕ್ಕುಗಳ ಮಾರಣಹೋಮ
ಭಾರತದ ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಪೊರೇಟ್ ಕಂಪನಿಗಳ ಲಾಭವನ್ನು ಹೆಚ್ಚಿಸಲು ಮತ್ತು ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕಲು 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಈ ಸಂಹಿತೆಗಳು ನವೆಂಬರ್ 21, 2025 ರಿಂದ ಜಾರಿಗೆ ಬಂದಿದ್ದು, ಇವು ಕಾರ್ಮಿಕ ವರ್ಗದ ಮೇಲೆ ನಡೆದಿರುವ ಅತ್ಯಂತ ವ್ಯವಸ್ಥಿತ ದಾಳಿಯಾಗಿದೆ.
ನಾಲ್ಕು ಕಾರ್ಮಿಕ ಸಂಹಿತೆಗಳ ಒಂದು ವಿಮರ್ಶಾತ್ಮಕ ನೋಟ
- ವೇತನ ಸಂಹಿತೆ (Code on Wages, 2019): ಇದು ಕನಿಷ್ಠ ವೇತನವನ್ನು ಸಾರ್ವತ್ರಿಕಗೊಳಿಸುವುದಾಗಿ ಹೇಳಿದರೂ, ವಾಸ್ತವದಲ್ಲಿ ವೇತನದ ವ್ಯಾಖ್ಯಾನವನ್ನು ಸಂಕೀರ್ಣಗೊಳಿಸಿದೆ. ಕನಿಷ್ಡ ವೇತನ ನಿಗದಿ ಮಾಡಲು ರಾಜ್ಯ ಸರ್ಕಾರಗಳಿಗಿದ್ದ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ರಾಷ್ಟ್ರೀಯ ಸಾಮಾನ್ಯ ಕನಿಷ್ಟ ವೇತನ ನಿಗದಿಪಡಿಸುವ ಬದಲು ಅತ್ಯಂತ ಕಡಿಮೆಯ ನೆಲಮಟ್ಟದ ವೇತನವನ್ನು ನಿಗದಿಪಡಿಸಿದೆ. ಮೂಲ ವೇತನವು ಒಟ್ಟು ವೇತನದ ಶೇ. 50 ರಷ್ಟು ಇರಲೇಬೇಕೆಂಬ ನಿಯಮವು ಕಾರ್ಮಿಕರ ಭವಿಷ್ಯನಿಧಿ (PF) ಕೊಡುಗೆಯನ್ನು ಹೆಚ್ಚಿಸಿದರೂ, ಅವರ ಕೈಗೆ ಸಿಗುವ ನಗದು ವೇತನವನ್ನು (Take-home pay) ಕಡಿಮೆ ಮಾಡಿದೆ. ಇದರಿಂದಾಗಿ ಪ್ರಸ್ತುತ ಜೀವನ ವೆಚ್ಚವನ್ನು ಭರಿಸಲು ಕಾರ್ಮಿಕರು ಹೆಣಗಾಡುತ್ತಿದ್ದಾರೆ.
- ಕೈಗಾರಿಕಾ ಸಂಬಂಧಗಳ ಸಂಹಿತೆ (Industrial Relations Code, 2020): ಈ ಸಂಹಿತೆಯು ಕಾರ್ಮಿಕರ ಮುಷ್ಕರ ಹಕ್ಕನ್ನು ಮತ್ತು ಸಂಘಟನೆಯ ಹಕ್ಕನ್ನು ಬಹುತೇಕ ಹತ್ತಿಕ್ಕಿದೆ. 300 ಕ್ಕಿಂತ ಕಡಿಮೆ ಕಾರ್ಮಿಕರಿರುವ ಕಾರ್ಖಾನೆಗಳಲ್ಲಿ ಸರ್ಕಾರಿ ಅನುಮತಿಯಿಲ್ಲದೆಯೇ ಕಾರ್ಮಿಕರನ್ನು ಕೆಲಸದಿಂದ ತೆಗೆಯಲು (Retrenchment) ಮತ್ತು ಘಟಕಗಳನ್ನು ಮುಚ್ಚಲು ಮಾಲೀಕರಿಗೆ ಸ್ವಾತಂತ್ರ್ಯ ನೀಡಲಾಗಿದೆ. ಇದು ಕಾರ್ಮಿಕರ ಉದ್ಯೋಗ ಭದ್ರತೆಯನ್ನು ಶೂನ್ಯಕ್ಕೆ ಇಳಿಸಿದೆ. ಕಾರ್ಮಿಕ ಸಂಘಗಳನ್ನು ರಚಿಸಲು ಹಾಗೂ ನಿರ್ವಹಿಸಲು ಅತ್ಯಂತ ಕಠಿಣ ನಿರ್ಬಂಧಗಳನ್ನು ಹಾಕಲಾಗಿದೆ. ಕಾರ್ಮಿಕರ ಚೌಕಾಶಿ ಹಕ್ಕು ಮತ್ತು ಮುಷ್ಕರದ ಹಕ್ಕನ್ನು ಮೊಟಕುಗೊಳಿಸಲಾಗಿದೆ.
- ಸಾಮಾಜಿಕ ಭದ್ರತಾ ಸಂಹಿತೆ (Code on Social Security, 2020): ಅಸಂಘಟಿತ ವಲಯದ ಮತ್ತು ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವುದಾಗಿ ಸರ್ಕಾರ ಹೇಳಿದರೂ, ಅದಕ್ಕೆ ಬೇಕಾದ ಹಣಕಾಸಿನ ಸಂಪನ್ಮೂಲಗಳ ಬಗ್ಗೆ ಈ ಸಂಹಿತೆ ಮೌನವಾಗಿದೆ. ಇಎಸ್ಐ (ESIC) ಮತ್ತು ಪಿಎಫ್ (EPFO) ವ್ಯಾಪ್ತಿಯನ್ನು ವಿಸ್ತರಿಸುವ ಬದಲು, ಅದನ್ನು ಮಾಲೀಕರ ಮರ್ಜಿಗೆ ಬಿಡಲಾಗಿದೆ.
- ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಸಂಹಿತೆ (OSH Code, 2020): ಇದು ಕಾರ್ಮಿಕರ ಕೆಲಸದ ಪರಿಸ್ಥಿತಿಯನ್ನು ಸುಧಾರಿಸುವ ಬದಲು, ಮಾಲೀಕರಿಗೆ ಹೆಚ್ಚಿನ ವಿನಾಯಿತಿಗಳನ್ನು ನೀಡಿದೆ. ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ ನೀಡುವುದು ಮತ್ತು ಮಹಿಳೆಯರಿಗೆ ರಾತ್ರಿ ಪಾಳಿಯ ಕೆಲಸವನ್ನು ಕಡ್ಡಾಯಗೊಳಿಸುವ ಮೂಲಕ ಕಾರ್ಮಿಕರನ್ನು ಶೋಷಣೆಗೆ ಒಡ್ಡಲಾಗಿದೆ. ಕಾರ್ಮಿಕರಿಗೆ ಖಾಯಂ ಕೆಲಸದ ಹಕ್ಕುಗಳನ್ನು ಕಸಿದು ನಿಗದಿತ ಅವಧಿಯ ಉದ್ಯೋಗ ನೀಡುವ ಅವಕಾಶವನ್ನು ಮಾಲೀಕರಿಗೆ ನೀಡಲಾಗಿದೆ.
ಎಲ್ಲದಕ್ಕಿಂತ ಮುಖ್ಯವಾಗಿ ಈ ಕಾರ್ಮಿಕ ಸಂಹಿತೆಗಳು ಕಾರ್ಮಿಕ ತಪಾಸಣಾ ವ್ಯವಸ್ಥೆಯನ್ನು (Inspection system) ರದ್ದುಗೊಳಿಸಿ, ಅದರ ಬದಲಿಗೆ “ಫೆಸಿಲಿಟೇಟರ್” (Facilitator) ಹೆಸರಿನಲ್ಲಿ ಕಾರ್ಮಿಕ ಅಧಿಕಾರಿಗಳು ಮಾಲೀಕರಿಗೆ ಸಹಾಯ ಮಾಡುವಂತೆ ಮಾಡಲಾಗಿದೆ. ಇದು ಕಾರ್ಖಾನೆಗಳಲ್ಲಿ ಸುರಕ್ಷತಾ ನಿಯಮಗಳ ಉಲ್ಲಂಘನೆಗೆ ದಾರಿ ಮಾಡಿಕೊಟ್ಟಿದೆ. ಇಂತಹ ನಿಯಮಗಳಿಂದಾಗಿ ಅನ್ಯಾಯಕ್ಕೊಳಗಾದ ಕಾರ್ಮಿಕರಿಗೆ ನ್ಯಾಯ ಮರೀಚೆಕೆಯಾಗಲಿದೆ ಹಾಗೂ ಖಾಸಗಿ ಉದ್ದಿಮೆ, ಉತ್ಪಾದನೆ, ಬಂಡವಾಳದ ಮೇಲೆ ಸರ್ಕಾರದ ಹಿಡಿತ ಸಂಪೂರ್ಣವಾಗಿ ತಪ್ಪಲಿದೆ. ಇದು ಬಂಡವಾಳಗಾರರಿಗೆ ಕಾರ್ಮಿಕ ಕಾನೂನುಗಳನ್ನು ಉಲ್ಲಂಘನೆ ಮಾಡಿ ಕಾರ್ಮಿಕರ ಶ್ರಮ ಶಕ್ತಿಯನ್ನು ಲೂಟಿ ಮಾಡಿ ಅತಿಯಾದ ಲಾಭ ಮಾಡಲು ಅವಕಾಶ ಸಿಕ್ಕಂತಾಗಿದೆ.
ನಿರುದ್ಯೋಗದ ಭಯಾನಕತೆ ಮತ್ತು ಆರ್ಥಿಕ ಅಸಮಾನತೆ
ಭಾರತವು ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಹೇಳಿಕೊಳ್ಳುತ್ತಿದ್ದರೂ, ಈ ಬೆಳವಣಿಗೆಯು “ಉದ್ಯೋಗ ರಹಿತ ಬೆಳವಣಿಗೆ” (Jobless Growth) ಆಗಿದೆ. 2026ರ ಆರಂಭದಲ್ಲಿ ಭಾರತದ ನಿರುದ್ಯೋಗ ಪರಿಸ್ಥಿತಿಯು ಅತ್ಯಂತ ಕಳವಳಕಾರಿಯಾಗಿದೆ.
ಮೂಡಿಸ್ ಅನಾಲಿಟಿಕ್ಸ್ (Moody’s) ವರದಿಯ ಪ್ರಕಾರ, 2026ರಲ್ಲಿ ಭಾರತದ ನಿರುದ್ಯೋಗ ದರವು ಶೇ. 7 ಕ್ಕೆ ಏರಿಕೆಯಾಗುವ ಮುನ್ಸೂಚನೆ ಇದೆ, ಇದು ಏಷ್ಯಾ-ಪೆಸಿಫಿಕ್ ವಲಯದಲ್ಲೇ ಅತ್ಯಂತ ಹೆಚ್ಚು. ಅಜೀಂ ಪ್ರೇಮ್ಜೀ ವಿಶ್ವವಿದ್ಯಾಲಯದ ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2026’ ವರದಿಯು ಬೆಚ್ಚಿಬೀಳಿಸುವ ಸತ್ಯವನ್ನು ಬಿಚ್ಚಿಟ್ಟಿದೆ: 25 ವರ್ಷಕ್ಕಿಂತ ಕೆಳಗಿನ ಪದವೀಧರ ಯುವಕರಲ್ಲಿ ನಿರುದ್ಯೋಗ ದರವು ಶೇ. 40 ರಷ್ಟಿದೆ. ಕೇವಲ ಶೇ. 7 ರಷ್ಟು ಪದವೀಧರ ಯುವಕರಿಗೆ ಮಾತ್ರ ಖಾಯಂ ವೇತನದ ಕೆಲಸಗಳು ದೊರೆಯುತ್ತಿವೆ.
ಭಾರತದ ನಿರುದ್ಯೋಗ ಸೂಚಕಗಳು (ಮಾರ್ಚ್ 2026) ಒಟ್ಟಾರೆ ನಿರುದ್ಯೋಗ ಭಾರತದಲ್ಲಿ 15 ವರ್ಷ ಮೇಲ್ಪಟ್ಟವರ ಅಖಿಲ ಭಾರತ ನಿರುದ್ಯೋಗ ದರವು ಶೇಕಡಾ 5.1 ರಷ್ಟಿದೆ ಎಂದು ಹೇಳುತ್ತಿವೆ. ನಗರ ಪಪ್ರದೇಶಗಳಲ್ಲಿನ ನಿರುದ್ಯೋಗ ದರವು ಶೇಕಡಾ 6.8 ರಷ್ಟಿದೆ ಎಂದು ದಾಖಲಾಗಿದೆ. 15 ರಿಂದ 29 ವರ್ಷದೊಳಗಿನ ಯುವಜನರಲ್ಲಿ ನಿರುದ್ಯೋಗದ ಪ್ರಮಾಣ ಶೇಕಡಾ 15.2 ರಷ್ಟಿದೆ. 25 ವರ್ಷದೊಳಗಿನ ಪದವೀಧರ ಯುವಜನರಲ್ಲಿ ನಿರುದ್ಯೋಗ ದರವು ಅತ್ಯಂತ ಹೆಚ್ಚಾಗಿದ್ದು, ಅದು ಶೇಕಡಾ 40.0 ಕ್ಕೆ ತಲುಪಿದ. ಮಹಿಳಾ ನಿರುದ್ಯೋಗ ದರವು ಗರಿಷ್ಠ ಶೇಕಡಾ 47.1 ರಷ್ಟಿದೆ.
ಕಾರ್ಪೊರೇಟ್ ಲಾಭದ ಹೆಚ್ಚಳ ಮತ್ತು ಕಾರ್ಮಿಕರ ಆದಾಯದ ಕುಸಿತ
ಒಂದೆಡೆ ನಿರುದ್ಯೋಗ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಬಂಡವಾಳಗಾರರ ಲಾಭವು ಅಗಾಧವಾಗಿ ಬೆಳೆಯುತ್ತಿದೆ. 2025ರ ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತೀಯ ಕಾರ್ಪೊರೇಟ್ ಕಂಪನಿಗಳ (India Inc) ಮಾರಾಟವು ಶೇ. 12.6 ರಷ್ಟು ಹೆಚ್ಚಾಗಿದೆ. ಆದರೂ, ಕಾರ್ಮಿಕರ ನೈಜ ವೇತನದ ಬೆಳವಣಿಗೆಯು ಶೂನ್ಯ ಅಥವಾ ಅತ್ಯಂತ ಮಂದಗತಿಯಲ್ಲಿದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ILO) 2024-25ರ ಜಾಗತಿಕ ವೇತನ ವರದಿಯು ಕಾರ್ಮಿಕರ ಉತ್ಪಾದಕತೆ ಹೆಚ್ಚಿದ್ದರೂ, ಅವರಿಗೆ ಸಿಗುವ ವೇತನದ ಪಾಲು ಕಡಿಮೆಯಾಗುತ್ತಿದೆ ಎಂದು ಎಚ್ಚರಿಸಿದೆ. ಕಾರ್ಮಿಕರ ಆದಾಯದಲ್ಲಿನ ಈ ಕುಸಿತವು ದೇಶದ ಒಳಗಿನ ಗ್ರಾಹಕ ಬೇಡಿಕೆಯನ್ನು (Consumer Demand) ಕುಂಠಿತಗೊಳಿಸುತ್ತಿದೆ, ಇದು ಆರ್ಥಿಕತೆಗೆ ಮಾರಕವಾಗಿದೆ. ಅಡುಗೆ ಅನಿಲದ ಬೆಲೆ ಏರಿಕೆಯು ಕಾರ್ಮಿಕರ ಬದುಕನ್ನು ದುರ್ಭರಗೊಳಿಸಿದೆ. ಕಾಳ ಸಂತೆಯಲ್ಲಿ (Black market) ಗ್ಯಾಸ್ ಸಿಲಿಂಡರ್ ಬೆಲೆ ₹3,000 ರಿಂದ ₹4,000 ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಅನೇಕ ವಲಸೆ ಕಾರ್ಮಿಕರು ಹಸಿವಿನಿಂದ ಬಳಲುತ್ತಿದ್ದಾರೆ ಅಥವಾ ಊರುಗಳಿಗೆ ಮರಳುತ್ತಿದ್ದಾರೆ.
ಕನಿಷ್ಟ ವೇತನದ ಹೆಚ್ಚಳಕ್ಕಾಗಿ ಕಾರ್ಮಿಕರ ಹೋರಾಟ.
ಕರ್ನಾಟಕದಲ್ಲಿ ಕೈಗಾರಿಕಾ ಕಾರ್ಮಿಕರು, ಅಂಗನವಾಡಿ ನೌಕರರು, ಬಿಸಿಯೂಟ ಕೆಲಸಗಾರರು, ಗ್ರಾಮ ಪಂಚಾಯತ್ ನೌಕರರು, ಪ್ಲಾಂಟೇಷನ್ ಕಾರ್ಮಿಕರು, ಪೌರ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತಿತರೆ ಕಾರ್ಮಿಕರು ನಿರಂತರವಾದ ಹೋರಾಟದಲ್ಲಿ ತೊಡಗಿದ್ದಾರೆ.
ಕೈಗಾರಿಕೆಗಳು ಮತ್ತು ಸೇವಾ ವಲಯಗಳಲ್ಲಿ ದುಡಿಯುತ್ತಿರುವ ಎಲ್ಲಾ ಅಕುಶಲ ಕಾರ್ಮಿಕರಿಗೆ ಬೆಲೆ ಏರಿಕೆಗೆ ಅನುಗುಣವಾಗಿ ₹36 ಸಾವಿರ ಕನಿಷ್ಠ ವೇತನ ನಿಗದಿಪಡಿಸುವುದು. ಕುಶಲ ಮತ್ತು ಅತಿಕುಶಲ ಕಾರ್ಮಿಕರಿಗೆ ಕ್ರಮವಾಗಿ ಶೇಕಡ 15 ರಷ್ಟು ಹೆಚ್ಚಿನ ಮೊತ್ತದ ಕನಿಷ್ಟ ವೇತನದ ದರಗಳನ್ನು ನಿಗದಿಪಡಿಸುವುದು. ಕಾಫಿ ಪ್ಲಾಂಟೇಶನ್ ಕಾರ್ಮಿಕರಿಗೆ ದಿನಕ್ಕೆ ₹1,000 ಕನಿಷ್ಠ ವೇತನ ಮತ್ತು ಕಲ್ಯಾಣ ಮಂಡಳಿ ಸ್ಥಾಪನೆ. ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸಿ, ನಿರಂತರವಾದ ಕೆಲಸಗಳಲ್ಲಿ ತೊಡಗಿರುವವರನ್ನು ಖಾಯಂ ಮಾಡುವುದು. ಉದ್ಯೋಗ ಖಾತ್ರಿ ಯೋಜನೆಯನ್ನು ಬಲಪಡಿಸಿ ನಗರ ವ್ಯಾಪ್ತಿಗೂ ವಿಸ್ತರಿಸಬೇಕು ಹಾಗೂ ಕಾರ್ಮಿಕರಿಗೆ ಕನಿಷ್ಟ 200 ದಿನಗಳ ಕೆಲಸ ಮತ್ತು ₹700 ಕೂಲಿ ನೀಡುವುದು. ಸ್ಕೀಮ್ ನೌಕರರಿಗೆ (ಅಂಗನವಾಡಿ, ಬಿಸಿಯೂಟ, ಆಶಾ) ಕನಿಷ್ಠ ವೇತನ ನೀಡುವುದು. ವಸತಿ ನಿವೇಶನ ರಹಿತ ಕಾರ್ಮಿಕರಿಗೆ ವಸತಿ, ಉತ್ತಮ ಗುಣಮಟ್ಟದ ಉಚಿತ ವೈದ್ಯಕೀಯ ಸೌಲಭ್ಯ ಇತ್ಯಾದಿ ಸಾಮಾಜಿಕ ಭದ್ರತೆಯ ಬೇಡಿಕೆಗಳಿಗಾಗಿ ಕಾರ್ಮಿಕರು ನಿರಂತರವಾದ ಹೋರಾಟದಲ್ಲಿದ್ದಾರೆ. ದೇಶದ ಶೇ. 1 ರಷ್ಟು ಇರುವ ಅತಿ ಶ್ರೀಮಂತರ ಮೇಲೆ ಶೇ. 2 ರಷ್ಟು ಸಂಪತ್ತು ತೆರಿಗೆ ವಿಧಿಸಿದರೂ ಸಾಕು ಅದರಿಂದ ಸಂಗ್ರಹವಾಗುವ ಹಣವನ್ನು ಜನಕಲ್ಯಾಣಕ್ಕೆ ಕಾರ್ಮಿಕರ ಕಲ್ಯಾಣಕ್ಕೆ ಬಳಸಬಹುದಾಗಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಈ ಬೇಡಿಕೆಗಳನ್ನು ಪರಿಗಣಿಸುವ ಬದಲು, 12 ಗಂಟೆಗಳ ಕೆಲಸದ ಅವಧಿಗೆ ಅವಕಾಶ ನೀಡಿರುವುದು ಮತ್ತು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಮುಂದಾಗಿರುವುದು ಆಳುವ ಸರ್ಕಾರಗಳು ಕಾರ್ಮಿಕರ ಮೇಲೆ ನಡೆಸುತ್ತಿರುವ ದೌರ್ಜನ್ಯವಾಗಿದೆ.
ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರು ಮತ್ತು ನೌಕರರೇ ತುಂಬಿದ್ದಾರೆ. ಸರ್ಕಾರದ ಶೇ. 80ರಷ್ಟು ಕೆಲಸಗಳನ್ನು ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರು ಮತ್ತು ನೌಕರರಿಂದ ಮಾಡಿಸಲಾಗುತ್ತಿದೆ. ಇವರಿಗೆ ಕನಿಷ್ಟ ವೇತನ, ಭವಿಷ್ಯನಿಧಿ, ಇಎಸ್ಐ ಮತ್ತಿತರೆ ಸೌಲಭ್ಯಗಳು ಸಮರ್ಪಕವಾಗಿ ಸಕಾಲದಲ್ಲಿಸಿಗುವುದಿಲ್ಲ ಹಾಗೂ ಇವತು ಸಂಘ ಕಟ್ಟಿ ಕಾನೂನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಮುಂದಾಗಲೂ ನಿರ್ಬಂಧಗಳನ್ನು ಹೇರಲಾಗಿದೆ. ಇದು ಮಾದರಿ ಮಾಲೀಕನಾಗಬೇಕಿರುವ ಸರ್ಕಾರವೇ ಕಾರ್ಮಿಕರ ಕಾನೂನುಗಳನ್ನು ಉಲ್ಲಂಘಿಸುತ್ತಿದೆ.
ಕನಿಷ್ಠ ವೇತನದ ಬೇಡಿಕೆ ಮತ್ತು ವೈಜ್ಞಾನಿಕ ಆಧಾರಗಳು
ಕಾರ್ಮಿಕ ಸಂಘಟನೆಗಳು ಇಂದು ₹36,000 ಕನಿಷ್ಠ ವೇತನವನ್ನು ಒತ್ತಾಯಿಸುತ್ತಿವೆ. ಇದು ಕೇವಲ ಒಂದು ಅಂಕಿ-ಅಂಶವಲ್ಲ, ಇದು ಸುಪ್ರೀಂ ಕೋರ್ಟ್ ನೀಡಿದ ಮಾರ್ಗಸೂಚಿಗಳು ಮತ್ತು 15ನೇ ಭಾರತೀಯ ಕಾರ್ಮಿಕ ಸಮ್ಮೇಳನದ (ILC) ಶಿಫಾರಸುಗಳ ಮೇಲೆ ಆಧಾರಿತವಾಗಿದೆ. ಒಬ್ಬ ಕಾರ್ಮಿಕನಿಗೆ ದಿನಕ್ಕೆ 2,700 ಕ್ಯಾಲೊರಿ ಆಹಾರ, ವರ್ಷಕ್ಕೆ 65.84 ಮೀಟರ್ ಬಟ್ಟೆ, ಮನೆ ಬಾಡಿಗೆ ಮತ್ತು ಮಕ್ಕಳ ಶಿಕ್ಷಣದ ವೆಚ್ಚವನ್ನು ಪರಿಗಣಿಸಿದಾಗ ಈ ಕನಿಷ್ಠ ವೇತನವು ಅತ್ಯಗತ್ಯವಾಗಿದೆ. ಕರ್ನಾಟಕದಲ್ಲಿ 2016-17ರ ನಂತರ ವೇತನ ಪರಿಷ್ಕರಣೆ ಆಗದಿರುವುದು ಕಾರ್ಮಿಕರ ಜೀವನಮಟ್ಟವನ್ನು ಅತ್ಯಂತ ಕೆಳಮಟ್ಟಕ್ಕೆ ತಳ್ಳಿದೆ. ಏರಿಳಿತದ ತುಟ್ಟಿ ಭತ್ಯೆ (ವೇರಿಯಬಲ್ ಡಿಯರ್ನೆಸ್ ಅಲೋವೆನ್ಸ್ – VDA) ಅನ್ನು ಪ್ರತಿ ಪಾಯಿಂಟ್ಗೆ 4 ಪೈಸೆ ಬದಲಾಗಿ 8 ಪೈಸೆ ಮಾಡಬೇಕಿದೆ. ಕರ್ನಾಟಕದಲ್ಲಿ ಪ್ರಸ್ತುತ ಅಕುಶಲ ಕಾರ್ಮಿಕರ ಕನಿಷ್ಟ ವೇತನವು ₹15,000 ಕ್ಕಿಂತಲೂ ಕಡಿಮೆಯಿದೆ ಎನ್ನುವುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ.
‘ಮೇ ದಿನ’ ಬರಿಯ ಆಚರಣೆಯಲ್ಲ ಮುಂದಿನ ಹೋರಾಟದ ಕರೆ
2026ರ ಮೇ ದಿನವು ಕಾರ್ಮಿಕ ವರ್ಗಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಸಾಮ್ರಾಜ್ಯಶಾಹಿ ಯುದ್ಧಗಳು ಮತ್ತು ಕಾರ್ಪೊರೇಟ್ ಪರ ನೀತಿಗಳು ಜಗತ್ತನ್ನು ಹೊಸ ಗುಲಾಮಗಿರಿಗೆ ತಳ್ಳುತ್ತಿವೆ. ಭಾರತದಲ್ಲಿ ಕಾರ್ಮಿಕ ಸಂಹಿತೆಗಳ ಮೂಲಕ ಕಾರ್ಮಿಕರ ಹೋರಾಟದ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರು ಒಗ್ಗೂಡಿ ಹೋರಾಡುವುದು ಅನಿವಾರ್ಯವಾಗಿದೆ. ಮೇ ದಿನದ ಹುತಾತ್ಮರ ತ್ಯಾಗವು ವ್ಯರ್ಥವಾಗಬಾರದೆಂದರೆ, ನವ ಉದಾರವಾದಿ ನೀತಿಗಳ ವಿರುದ್ಧ ಮತ್ತು ಶೋಷಣೆ ಮುಕ್ತ ಸಮಾಜವಾದಿ ಸಮಾಜದ ನಿರ್ಮಾಣಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರಬೇಕು. ಕಾರ್ಮಿಕರು ನ್ಯಾಯಯುತವಾದ ₹36 ಸಾವಿರ ಕನಿಷ್ಡ ವೇತನ, ಖಾಯಂ ಕೆಲಸ, ಸಾಮಾಜಿಕ ಭದ್ರತೆಗಾಗಿ ಸಂಘಟಿತವಾಗಿ ಹೋರಾಟ ಮುಂದುವರಿಸಬೇಕಿದೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಹಾಗೂ ಕಾರ್ಮಿಕರನ್ನು ನವ ಗುಲಾಮಗಿರಿಗೆ ತಲ್ಲುತ್ತಿರುವ ಕರಾಳ ಕಾರ್ಮಿಕ ಸಂಹಿತೆಗಳನ್ನು ಹಿಮ್ಮೆಟ್ಟಿಸಬೇಕು.
ಈ ಹಿನ್ನೆಲೆಯಲ್ಲಿ ಕರ್ನಾಟಕದ ಕಾರ್ಮಿಕ ವರ್ಗ ₹36 ಸಾವಿರ ಕನಿಷ್ಟ ವೇತನ, ಕೆಲಸದ ಭದ್ರತೆ, ಗುತ್ತಿಗೆ ಕಾರ್ಮಿಕರ ಖಾಯಂ, ಸಾಮಾಜಿಕ ಭದ್ರತೆಗಳಿಗೆ ಆಗ್ರಹಿಸಿ ಮತ್ತೊಮ್ಮೆ ಸಮರಧೀರ ಹೋರಾಟಕ್ಕೆ ಸಜ್ಜಾಗುತ್ತಿದೆ. ರಾಜ್ಯಾದ್ಯಂದ ಕಾರ್ಮಿಕರು ಮತ್ತು ಸಾರ್ವಜನಿಕರ ನಡುವೆ ಸಾಮೂಹಿಕ ಸಹಿ ಸಂಗ್ರಹ ಅಭಿಯಾನ ಮತ್ತು ಮೇ 30 ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯನ್ನು ಮುತ್ತಿಗೆ ಹಾಕುವ ತೀವ್ರ ಹೋರಾಟಕ್ಕೆ ಮುಂದಾಗಿದ್ದಾರೆ. ದುಡಿಯುವ ವರ್ಗದ ಐಕ್ಯತೆಯೇ ಈ ಸಂಘರ್ಷದಲ್ಲಿ ಅಂತಿಮ ವಿಜಯವನ್ನು ತಂದುಕೊಡಬಲ್ಲ ಏಕೈಕ ಶಕ್ತಿಯಾಗಿದೆ. ಈ ಮೇ ದಿನದಂದು ನಾವು ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಮತ್ತು ಸಾಮ್ರಾಜ್ಯಶಾಹಿ ಆಕ್ರಮಣಗಳ ವಿರುದ್ಧ ದೃಢವಾದ ಪ್ರತಿಜ್ಞೆಯನ್ನು ಮಾಡೋಣ.

