– ಹಾಸನದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ದಂಡ
ಹಾಸನ: ವೈದ್ಯರ ನಿರ್ಲಕ್ಷ್ಯದಿಂದ ಚಿಕಿತ್ಸೆಯ ಸಮಯ ಸೋಂಕು ತಗುಲಿ ರೋಗಿಯು ಮೃತಪಟ್ಟ ಹಿನ್ನೆಲೆ ಹಾಸನದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವೈದ್ಯರಿಗೆ ಬರೋಬ್ಬರಿ 30 ಲಕ್ಷ ದಂಡ ವಿಧಿಸಿದೆ.
ಹಾಸನ ನಗರದ ವಿದ್ಯಾನಗರದ ನಿವಾಸಿ ನಾಗೇಶ್ ಎಂಬುವರ ತಾಯಿ ಗಂಗಮ್ಮ ಅವರು ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯಲು 2023ರ ಜ. 4 ರಂದು ನಗರದ ಖಾಸಗಿ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿದಾಗಿ ಆಸ್ಪತ್ರೆಯ ವೈದ್ಯರು ಗಂಗಮ್ಮ ಅವರ ಪಿತ್ತಕೋಶದಲ್ಲಿ ಕಲ್ಲು ಉಂಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿ.ಎಂ.ಸಿ ಆಂಡ್ ಆರ್.ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿ ನಂತರ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯ ವೈದ್ಯ ಡಾ. ಸಯ್ಯದ್ ಶಫಿಕ್ ಅವರು ಗಂಗಮ್ಮ 2023ರ ಜ. 6ರಂದು ಶಸ್ತ್ರಚಿಕಿತ್ಸೆ ಮಾಡಿ ಸ್ಟಂಟ್ ಅಳವಡಿಸಿದ್ದು, ಈ ಸಂದರ್ಭದಲ್ಲಿ ಗಂಗಮ್ಮರವರಿಗೆ ಸೋಂಕು ಉಂಟಾಗಿ 2023ರ ಜ. 30 ರಂದು ಗಂಗಮ್ಮ ಸಾವನಪ್ಪಿದ್ದರು.
ವೈದ್ಯರ ನಿರ್ಲಕ್ಷ್ಯದಿಂದ ಚಿಕಿತ್ಸೆಯ ಸಮಯದಲ್ಲಿ ಸೋಂಕು ಉಂಟಾಗಿ ತಮ್ಮ ತಾಯಿಯವರು ಮರಣ ಹೊಂದಿದ್ದು, ಸೇವಾನ್ಯೂನ್ಯತೆ ಹಾಗೂ ಆಸ್ಪತ್ರೆಯ ಖರ್ಚಿನ ಪರಿಹಾರವಾಗಿ ಒಟ್ಟಾರೆ ರೂ.೫೦,೦೦,000 ಗಳನ್ನು ಕೊಡಿಸಿ ಕೊಡುವಂತೆ ಗಂಗಮ್ಮ ಅವರ ಪುತ್ರ ನಾಗೇಶ್ ಹಾಸನದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ2023ರ ನ. 3 ರಂದು ದೂರು ದಾಖಲಿಸಿದ್ದರು.
ಆಯೋಗದ ಅಧ್ಯಕ್ಷ ಸಿ.ಎಂ.ಚಂಚಲ ಹಾಗೂ ಮಹಿಳಾ ಸದಸ್ಯರಾದ ಅನುಪಮ.ಆರ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿ ವೈದ್ಯರು ಗಂಗಮ್ಮ ಅವರ ಬಗ್ಗೆ ಸರಿಯಾದ ಮುತುವರ್ಜಿ ವಹಿಸದೇ ರೋಗಿಗೆ ಸಾವಿಗೆ ಕಾರಣವಾದ ಹಿನ್ನೆಲೆ ಬೆಂಗಳೂರಿನ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನಿರ್ದೇಶಕರು, ವೈದ್ಯರಾದ ಡಾ. ಭುವನ ಕೃಷ್ಣ ಮತ್ತು ಡಾ.ಸಯ್ಯದ್ ಶಫಿಕ್ ಜಂಟಿಯಾಗಿ ಅಥವಾ ಬೇರೆ-ಬೇರೆಯಾಗಿ, ಒಟ್ಟು ಪರಿಹಾರದ ಮೊತ್ತ ರೂ.30,00,000ಗಳನ್ನು ಆದೇಶವಾದ ದಿನಾಂಕದಿಂದ 6 ವಾರಗಳೊಳಗಾಗಿ ನೀಡಬೇಕೆಂದು, ತಪ್ಪಿದ್ದಲ್ಲಿ ಒಟ್ಟು ಮೊತ್ತಗಳ ಮೇಲೆ ಸಾಲಿಯಾನ ಶೇ.10 ಬಡ್ಡಿಯೊಂದಿಗೆ ಪಾವತಿಸುವಂತೆ ತೀರ್ಪು ನೀಡಿದ್ದಾರೆ.

