ಹಾಸನ: ಭಾರತೀಯ ಚುನಾವಣಾ ಆಯೋಗದ “ವಿಶೇಷ ತೀವ್ರ ಪರಿಷ್ಕರಣೆ (SIR)” ಸಾಧಕ – ಬಾಧಕಗಳು ಕುರಿತು ಭಾರತ ಕಮ್ಯೂನಿಸ್ಟ್ ಪಕ್ಷ ( ಮಾರ್ಕ್ಸ್ ವಾದಿ) ಹಾಸನ ಜಿಲ್ಲಾ ಸಂಘಟನಾ ಸಮಿತಿಯು ಜೂನ್ 18ರ ಗುರುವಾರ ಬೆಳಗ್ಗೆ 10.30ಕ್ಕೆ ಹಾಸನ ಜಿಲ್ಲಾ ಆಸ್ಪತ್ರೆ ರಸ್ತೆಯಲ್ಲಿರುವ ಸ್ವಾಭಿಮಾನ ಭವನದಲ್ಲಿ ದುಂಡುಮೇಜಿನ ಸಭೆ ಆಯೋಜಿಸಿದೆ.
ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಅಕ್ರಮ ಮತದಾರರನ್ನು ತೆಗೆದುಹಾಕುವ ನೆಪದಲ್ಲಿ ನಡೆಸುತ್ತಿರುವ ಈ ಎಸ್.ಐ.ಆರ್ ಪ್ರಕ್ರಿಯೆಯು ದೇಶದ ಕೋಟ್ಯಾಂತರ ಬಡಜನರು, ಕೂಲಿಕಾರರು, ವಲಸೆ ಕಾರ್ಮಿಕರು, ಮಹಿಳೆಯರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ತಳ ಸಮುದಾಯಗಳ ಜನರ ಮತದಾನದ ಹಕ್ಕನ್ನೇ ಕಸಿಯುವ ಅಪಾಯವನ್ನು ಉಂಟುಮಾಡುತ್ತಿದೆ ಎಂದು ಸಿಪಿಎಂ ಹೇಳಿದೆ.
ಕೇಂದ್ರದ ಮೋದಿ ಸರ್ಕಾರದ ರಾಜಕೀಯ ಕಾರ್ಯಸೂಚಿಯಂತೆ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಸಿ.ಎ.ಎ. ಮತ್ತು ಎನ್.ಆರ್.ಸಿ.ಗಳ ಮತ್ತೊಂದು ಮಾದರಿಯಾಗಿದೆ. ಸಂವಿಧಾನದ ಜನ ಪ್ರಾತಿನಿಧ್ಯ ಕಾಯ್ದೆಯಲ್ಲಿ ‘ವಿಶೇಷ ತೀವ್ರ ಪರಿಷ್ಕರಣೆ’ ಉಲ್ಲೇಖ ಇಲ್ಲದಿದ್ದರೂ ಜನತೆಯ ಸಂವಿಧಾನಬದ್ದ ಮತದಾನದ ಹಕ್ಕನ್ನು ಖಾತ್ರಿ ಮಾಡಬೇಕಾದ ಸುಪ್ರೀಂ ಕೋರ್ಟ್ ಸಹ ಎಸ್.ಐ.ಆರ್. ನಡೆಸುವ ಚುನಾವಣಾ ಆಯೋಗದ ಹಕ್ಕನ್ನು ಎತ್ತಿಹಿಡಿದಿರುವುದು ಆತಂಕಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ “ಒಳಗೊಳ್ಳಬೇಕಾದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಹೊರತಳ್ಳಲ್ಪಡುತ್ತಿರುವ ಮತದಾರರು. ಭಾರತೀಯ ಚುನಾವಣಾ ಆಯೋಗದ “ವಿಶೇಷ ತೀವ್ರ ಪರಿಷ್ಕರಣೆ (SIಖ)” ಸಾಧಕ – ಬಾಧಕಗಳು ಕುರಿತು ದಿನಾಂಕ 18 ಜೂನ್ 2026 ರಂದು ಗುರುವಾರ ಬೆಳಿಗ್ಗೆ 10.30 ಕ್ಕೆ ಹಾಸನದ ಸ್ವಾಭಿಮಾನ ಭವನದಲ್ಲಿ “ದುಂಡು ಮೇಜಿನ ಸಭೆ”ಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್ವಾದಿ ಹಾಸನ ಜಿಲ್ಲಾ ಸಂಘಟನಾ ಸಮಿತಿ ನೇತೃತ್ವದಲ್ಲಿ ಆಯೋಜಿಸಲಾಗಿದೆ.
ಈ ದುಂಡು ಮೇಜಿನ ಸಭೆಯಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಎಸ್.ವಿಮಲಾ ರವರು ಭಾಗವಹಿಸಲಿದ್ದಾರೆ. ನಾಗರೀಕರು ಈ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡುವ ಮೂಲಕ ನಿಜವಾದ ಅರ್ಥದಲ್ಲಿ ಎಲ್ಲರನ್ನೂ ಒಳಗೊಳ್ಳುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಕೈಜೋಡಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ನವೀನ್ ಕುಮಾರ್ ಮನವಿ ಮಾಡಿದ್ದಾರೆ.

