Home ಲೇಖನಚರ್ಚೆ ಪಿಎಂ ಸೂರ್ಯಘರ್ ಯೋಜನೆ ವೈಫಲ್ಯಕ್ಕೆ ಇಂಜಿನಿಯರಿಂಗ್ ಮಿತಿ ಕಾರಣ!

ಪಿಎಂ ಸೂರ್ಯಘರ್ ಯೋಜನೆ ವೈಫಲ್ಯಕ್ಕೆ ಇಂಜಿನಿಯರಿಂಗ್ ಮಿತಿ ಕಾರಣ!

ಇಂಧನ ಮಾರುಕಟ್ಟೆಯ ದೋಷಪೂರಿತ ನೀತಿಗಳಿಂದ ಗ್ರಾಹಕರ ಶೋಷಣೆ

by Editor
    ಎಂ. ಕೃಷ್ಣಪ್ರಸಾದ್ ಭಟ್ ಮದ್ದಡ್ಕ

21ನೇ ಶತಮಾನದ ಆಧುನಿಕ ಜಗತ್ತಿನಲ್ಲಿ ಇಂಧನ ಭದ್ರತೆ (Energy Security) ಮತ್ತು ವಿದ್ಯುತ್ ಸ್ವಾವಲಂಬನೆ ಎನ್ನುವುದು ಕೇವಲ ಒಂದು ಐಷಾರಾಮಿ ಆಯ್ಕೆಯಾಗಿ ಉಳಿದಿಲ್ಲ,  ಅದು ಪ್ರತಿಯೊಂದು ಕುಟುಂಬದ ಆರ್ಥಿಕ ಸ್ಥಿರತೆಯನ್ನು ನಿರ್ಧರಿಸುವ ಅತ್ಯಂತ ಪ್ರಮುಖ ಅಂಶವಾಗಿದೆ. ಇದನ್ನೇ ಮನಗಂಡು, ದೇಶದ ಪ್ರತಿಯೊಂದು ಮಧ್ಯಮ ಮತ್ತು ಕೆಳವರ್ಗದ ಮನೆಯ ಮೇಲ್ಛಾವಣಿಯೂ ಒಂದು ಕಿರು ವಿದ್ಯುತ್ ಉತ್ಪಾದನಾ ಕೇಂದ್ರವಾಗಬೇಕು (Micro-power generation unit) ಎಂಬ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರವು ಕೋಟ್ಯಂತರ ರೂಪಾಯಿಗಳ ಬಜೆಟ್ ಹೊಂದಿರುವ ‘ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ’ಯನ್ನು ಜಾರಿಗೆ ತಂದಿತು.

ಮೇಲ್ನೋಟಕ್ಕೆ ಉಚಿತ ವಿದ್ಯುತ್ ಮತ್ತು ಭಾರಿ ಸಬ್ಸಿಡಿಯ ಆಕರ್ಷಕ ಆಫರ್ ಹೊಂದಿರುವ ಈ ಯೋಜನೆ, ತಾಂತ್ರಿಕವಾಗಿ ಇಂಧನ ಕ್ರಾಂತಿಯನ್ನೇ ಮಾಡಬೇಕಿತ್ತು.

​ಆದರೆ, ವಾಸ್ತವದ ನೆಲಗಟ್ಟಿನಲ್ಲಿ ನಿಂತು ನೋಡಿದಾಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಇಷ್ಟೊಂದು ಬೃಹತ್ ಪ್ರಚಾರದ ನಡುವೆಯೂ ಈ ಯೋಜನೆ ಯಾಕೆ ನಮ್ಮ ಹಳ್ಳಿ ಹಳ್ಳಿಗಳ ಮನೆಗಳನ್ನು ನಿರೀಕ್ಷಿತ ಮಟ್ಟದಲ್ಲಿ ತಲುಪುತ್ತಿಲ್ಲ? ತಂತ್ರಜ್ಞಾನ ಇಷ್ಟೊಂದು ಮುಂದುವರಿದಿದ್ದರೂ, ಜನಸಾಮಾನ್ಯರು ಲಕ್ಷಾಂತರ ರೂಪಾಯಿಗಳ ತಮ್ಮ ಕಷ್ಟದ ಗಳಿಕೆಯನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಇಷ್ಟೊಂದು ಹಿಂಜರಿಯುತ್ತಿರುವುದರ ಹಿಂದಿನ ರಹಸ್ಯವೇನು?

ಯಾವುದೇ ಒಂದು ತಂತ್ರಜ್ಞಾನವು ಕಾಗದದ ಮೇಲಿರುವ ನಿಯಮಗಳಿಗೂ ಮತ್ತು ನೈಜ ಪರಿಸರದಲ್ಲಿ (Real-world environment) ಅದು ನೀಡುವ ಕಾರ್ಯಕ್ಷಮತೆಗೂ ನಡುವೆ ಅಗಾಧವಾದ ವ್ಯತ್ಯಾಸವಿರುತ್ತದೆ. ಈ ಯೋಜನೆಯು ಸಾರ್ವಜನಿಕ ವಲಯದಲ್ಲಿ ನಿಧಾನಗತಿಯನ್ನು ಅನುಭವಿಸುತ್ತಿರುವುದರ ಹಿಂದೆ ಕೇವಲ ಆಡಳಿತಾತ್ಮಕ ಕಾರಣಗಳಿಲ್ಲ.  ಬದಲಾಗಿ ಇಂಜಿನಿಯರಿಂಗ್ ಮಿತಿಗಳು, ಇಂಧನ ಮಾರುಕಟ್ಟೆಯ ದೋಷಪೂರಿತ ನೀತಿಗಳು ಮತ್ತು ಸಾಮಾನ್ಯ ಗ್ರಾಹಕನ ಆರ್ಥಿಕ ಗಣಿತಕ್ಕೆ ಒಪ್ಪದ ಕೆಲವು ಕಹಿ ಸತ್ಯಗಳಿವೆ. ಆ ಪ್ರಾಯೋಗಿಕ ಹಾಗೂ ವೈಜ್ಞಾನಿಕ ಹಿನ್ನಡೆಗಳ ಸಂಪೂರ್ಣ ಜಾತಕವನ್ನು ಈಗ ಒಂದೊಂದಾಗಿ ಬಿಚ್ಚಿಡೋಣ.

1) ಬಿಟ್ಟಿಯಾಗಿ ಸಿಗುವ ಸೂರ್ಯನ ಬೆಳಕು, ಆದರೆ ಪವರ್ ಕಟ್ ಆದಾಗ ಕತ್ತಲಲ್ಲಿ ಕಾಯುವ ಅನಿವಾರ್ಯತೆ!

​ಈ ಯೋಜನೆಯ ಅಡಿಯಲ್ಲಿ ಸರ್ಕಾರವು ಅತಿ ಹೆಚ್ಚು ಪ್ರೋತ್ಸಾಹಿಸುತ್ತಿರುವ ಮತ್ತು ಸಬ್ಸಿಡಿ ನೀಡುತ್ತಿರುವುದು ‘ಆನ್-ಗ್ರಿಡ್’ (On-Grid) ಅಥವಾ ಗ್ರಿಡ್-ಕನೆಕ್ಟೆಡ್ ಸೋಲಾರ್ ವ್ಯವಸ್ಥೆಗೆ. ಮೇಲ್ನೋಟಕ್ಕೆ ಇದು ಅತ್ಯಂತ ಸರಳ ಮತ್ತು ಆರ್ಥಿಕವಾಗಿ ಲಾಭದಾಯಕ ಎಂದು ಕಂಡರೂ, ಇದರ ಹಿಂದೆ ಸಾಮಾನ್ಯ ಜನರಿಗೆ ತಕ್ಷಣಕ್ಕೆ ಅರ್ಥವಾಗದ ಒಂದು ಬಲವಾದ ಇಂಜಿನಿಯರಿಂಗ್ ಮತ್ತು ವೈಜ್ಞಾನಿಕ ಮಿತಿಯಿದೆ.

ಕರಾವಳಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಳೆಗಾಲದಲ್ಲೋ, ಜೋರಾದ ಗಾಳಿ-ಬಂದಾಗಲೋ ದಿನಗಟ್ಟಲೆ ಅಥವಾ ವಾರಗಟ್ಟಲೆ ಪವರ್ ಕಟ್ ಆಗುವುದು ನಮಗೆಲ್ಲರಿಗೂ ತಿಳಿದಿರುವ ಕಹಿ ಸತ್ಯ. ಅಂತಹ ಸಂದರ್ಭಗಳಲ್ಲಿ, ಆಕಾಶದಲ್ಲಿ ಪ್ರಖರವಾದ ಸೂರ್ಯನ ಬೆಳಕಿದ್ದರೂ, ನಿಮ್ಮ ಮನೆಯ ಮೇಲ್ಛಾವಣಿಯ ಮೇಲಿರುವ ಪ್ಯಾನಲ್‌ಗಳು ವಿದ್ಯುತ್ ಉತ್ಪಾದಿಸುತ್ತಿದ್ದರೂ, ನಿಮ್ಮ ಸ್ವಂತ ಮನೆಯಲ್ಲಿ ಒಂದು ಪುಟ್ಟ ಎಲ್‌ಇಡಿ ಬಲ್ಬ್ ಅಥವಾ ಫ್ಯಾನ್ ಹಾಕಿಕೊಳ್ಳಲು ಸಾಧ್ಯವಾಗುವುದಿಲ್ಲ! ಹಗಲು ಹೊತ್ತಿನಲ್ಲಿ ಸೂರ್ಯನ ಪ್ರಕಾಶಮಾನವಾದ ಶಕ್ತಿ ಬಿಟ್ಟಿಯಾಗಿ ಸಿಗುತ್ತಿದ್ದರೂ, ಗ್ರಾಹಕರು ಕತ್ತಲಲ್ಲಿ ಕಾಯಲೇಬೇಕಾದ ವಿಪರ್ಯಾಸ ಇಲ್ಲಿದೆ.

​ಇದರ ಹಿಂದಿರುವ ವೈಜ್ಞಾನಿಕ ಕಾರಣವೇನೆಂದರೆ, ಆನ್-ಗ್ರಿಡ್ ಇನ್ವರ್ಟರ್‌ಗಳಲ್ಲಿ ಅಳವಡಿಸಲಾಗಿರುವ ‘ಆಂಟಿ-ಐಲ್ಯಾಂಡಿಂಗ್ ಪ್ರೊಟೆಕ್ಷನ್’ (Anti-Islanding Protection) ಎಂಬ ತಾಂತ್ರಿಕ ಸುರಕ್ಷತಾ ವ್ಯವಸ್ಥೆ. ಜಗತ್ತಿನ ಯಾವುದೇ ಅಧಿಕೃತ ವಿದ್ಯುತ್ ನಿಯಂತ್ರಣ ಮಂಡಳಿಗಳ ನಿಯಮಾವಳಿಗಳ ಪ್ರಕಾರ (IEEE 1547 ಅಥವಾ IEC 62116 ಮಾನದಂಡಗಳು), ಗ್ರಿಡ್‌ನಿಂದ ಬರುವ ವಿದ್ಯುತ್ ಸಂಪರ್ಕ ಕಟ್ ಆದ ತಕ್ಷಣ, ಮನೆಯಲ್ಲಿರುವ ಸೋಲಾರ್ ಇನ್ವರ್ಟರ್ ಕೂಡ ತನ್ನ ಕಾರ್ಯಾಚರಣೆಯನ್ನು ಕೇವಲ ಸೆಕೆಂಡುಗಳ ಒಳಗೆ ಸ್ವಯಂಚಾಲಿತವಾಗಿ ಸ್ಥಗಿತಗೊಳಿಸಬೇಕು. ಒಂದು ವೇಳೆ ಮೆಸ್ಕಾಂ ಅಥವಾ ಕೆಇಬಿ ಲೈನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಪವರ್ ಕಟ್ ಆಗಿದ್ದಾಗ, ನಿಮ್ಮ ಮನೆಯ ಸೋಲಾರ್ ಸಿಸ್ಟಮ್ ವಿದ್ಯುತ್ ಅನ್ನು ಉತ್ಪಾದಿಸಿ ಮರಳಿ ಲೈನ್‌ಗೆ ಕಳುಹಿಸಿದರೆ (Reverse Power Flow), ಅಲ್ಲಿ ಕಂಬದ ಮೇಲೆ ರಿಪೇರಿ ಕೆಲಸ ಮಾಡುತ್ತಿರುವ ಲೈನ್‌ಮ್ಯಾನ್‌ಗಳಿಗೆ ಭಾರಿ ಪ್ರಮಾಣದ ವಿದ್ಯುತ್ ಆಘಾತ (Electrocution) ಉಂಟಾಗುವ ಪ್ರಾಣಾಪಾಯ ಇರುತ್ತದೆ. ಈ ಮಾನವ ಸುರಕ್ಷತೆಯ ದೃಷ್ಟಿಯಿಂದ ಇನ್ವರ್ಟರ್ ಅನ್ನು ಸಂಪೂರ್ಣವಾಗಿ ಆಫ್ ಮಾಡಲಾಗುತ್ತದೆ.

​ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ ಮೇಲೂ, ಸ್ವಂತ ಸೂರಿನ ಮೇಲೆ ವಿದ್ಯುತ್ ಸ್ಥಾವರವಿದ್ದರೂ, ಸರಕಾರದ ಗ್ರಿಡ್‌ನಲ್ಲಿ ಕರೆಂಟ್ ಹೋದಾಗ ನಾವೂ ಕತ್ತಲಲ್ಲಿ ಕೂರಬೇಕು ಅಥವಾ ಕೈಯಲ್ಲಿದ್ದರೂ ಬಾಯಲ್ಲಿ ತಿನ್ನಲಾರದ ಪರಿಸ್ಥಿತಿ ಎನ್ನುವ ಈ ಪ್ರಾಯೋಗಿಕ ಹಿನ್ನಡೆಯೇ ಜನಸಾಮಾನ್ಯರನ್ನು ಆನ್-ಗ್ರಿಡ್ ವ್ಯವಸ್ಥೆಯಿಂದ ಮತ್ತು ಈ ಯೋಜನೆಯಿಂದ ದೂರವಿಡುತ್ತಿದೆ.

ಪವರ್ ಬ್ಯಾಕಪ್ ಬೇಕೆಂದರೆ ಬ್ಯಾಟರಿ ಆಧಾರಿತ ಹೈಬ್ರಿಡ್ ಸಿಸ್ಟಮ್‌ಗೇ ಹೋಗಬೇಕು, ಆದರೆ ಅದಕ್ಕೆ ತಗಲುವ ಭಾರಿ ವೆಚ್ಚವನ್ನು ಭರಿಸಲು ಸಾಮಾನ್ಯ ಜನರಿಗೆ ಸಾಧ್ಯವಾಗುತ್ತಿಲ್ಲ.

2) ಬಳಕೆಯ ಯೂನಿಟ್ ಪೂರ್ತಿ ಫ್ರೀ ಆದರೂ, ಜೇಬಿಗೆ ಕತ್ತರಿ ಹಾಕುವ ‘ಸ್ಥಿರ ಶುಲ್ಕ’ (Fixed Charges)!

​ಸೌರಶಕ್ತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಾಗ ಜನಸಾಮಾನ್ಯರನ್ನು ಆಕರ್ಷಿಸುವ ದೊಡ್ಡ ಮಂತ್ರ ಎಂದರೆ ‘ಶೂನ್ಯ ಬಿಲ್’ ಅಥವಾ ಉಚಿತ ವಿದ್ಯುತ್. ನೆಟ್-ಮೀಟರಿಂಗ್ (Net-Metering) ನಿಯಮಗಳ ಪ್ರಕಾರ, ಹಗಲಿನಲ್ಲಿ ನಿಮ್ಮ ಸೋಲಾರ್ ಪ್ಯಾನಲ್‌ಗಳು ಉತ್ಪಾದಿಸಿ ಸರ್ಕಾರಕ್ಕೆ ರಫ್ತು ಮಾಡಿದ (Export) ಒಟ್ಟು ಯೂನಿಟ್‌ಗಳು ಮತ್ತು ರಾತ್ರಿ ವೇಳೆ ನೀವು ಗ್ರಿಡ್‌ನಿಂದ ಆಮದು ಮಾಡಿಕೊಂಡ (Import) ಯೂನಿಟ್‌ಗಳ ನಡುವೆ ಗಣಿತದ ಸಮೀಕರಣ ನಡೆಸಿ ಹೊಂದಾಣಿಕೆ ಮಾಡಲಾಗುತ್ತದೆ. ಆದರೆ, ಇಲ್ಲಿಯೇ ಗ್ರಾಹಕರ ಕಣ್ಣಿಗೆ ತಕ್ಷಣಕ್ಕೆ ಕಾಣಿಸದ, ಜೇಬಿಗೆ ಕತ್ತರಿ ಹಾಕುವ ದೊಡ್ಡ ಆರ್ಥಿಕ ನೀತಿಯ ಲೋಪ ಅಡಗಿದೆ.

ನಿಮ್ಮ ತಿಂಗಳ ನಿವ್ವಳ ವಿದ್ಯುತ್ ಬಳಕೆ (Net Consumption) ಪೂರ್ತಿ ಶೂನ್ಯವಾಗಿದ್ದರೂ, ತಿಂಗಳ ಕೊನೆಯಲ್ಲಿ ಮೆಸ್ಕಾಂ ಅಥವಾ ಕೆಇಬಿ ಬಿಲ್ ಮಾತ್ರ ಎಂದಿಗೂ ಸೊನ್ನೆ ಬರುವುದಿಲ್ಲ! ಅದಕ್ಕೆ ಕಾರಣ, ಗ್ರಾಹಕರ ಮೇಲೆ ಬಲವಂತವಾಗಿ ಹೇರಲಾಗುವ ‘ಸ್ಥಿರ ಶುಲ್ಕ’ (Fixed Charges) ಮತ್ತು ಮೀಟರ್ ಬಾಡಿಗೆ.

​ಇದರ ಹಿಂದಿರುವ ಆರ್ಥಿಕ ಮತ್ತು ವೈಜ್ಞಾನಿಕ ಗಣಿತವನ್ನು ಅರ್ಥಮಾಡಿಕೊಳ್ಳಬೇಕು. ವಿದ್ಯುತ್ ಕಂಪನಿಗಳು ವಿಧಿಸುವ ಬಿಲ್‌ನಲ್ಲಿ ಪ್ರಮುಖವಾಗಿ ಎರಡು ಭಾಗಗಳಿರುತ್ತವೆ. ಒಂದು ನೀವು ಬಳಸುವ ಇಂಧನದ ದರ (Energy Charges), ಇನ್ನೊಂದು ನಿಮ್ಮ ಮನೆಗೆ ಮಂಜೂರಾದ ಲೋಡ್ ಸಾಮರ್ಥ್ಯದ ಆಧಾರದ ಮೇಲೆ ವಿಧಿಸುವ ಸ್ಥಿರ ಶುಲ್ಕ (Fixed/Demand Charges). ನೀವು 5kW ನಷ್ಟು ದೊಡ್ಡ ಸೋಲಾರ್ ಸಿಸ್ಟಮ್ ಹಾಕಬೇಕೆಂದರೆ, ನಿಮ್ಮ ಮನೆಯ ಸ್ಯಾಂಕ್ಷನ್ಡ್ ಲೋಡ್ ಕೂಡ ಕಡ್ಡಾಯವಾಗಿ 5kW ಇರಲೇಬೇಕು. ಪ್ರಸ್ತುತ ನಿಯಮಗಳ ಪ್ರಕಾರ, ಪ್ರತಿ ಕಿಲೋವ್ಯಾಟ್‌ಗೆ ಇಂತಿಷ್ಟು ಅಂತ ಸರ್ಕಾರ ನಿಗದಿಪಡಿಸಿರುವ ಕಡ್ಡಾಯ ಸ್ಥಿರ ಶುಲ್ಕ ಮತ್ತು ಅದರ ಮೇಲಿನ ವಿದ್ಯುತ್ ತೆರಿಗೆಯನ್ನು (Electricity Duty) ಲೆಕ್ಕ ಹಾಕಿದರೆ, 5kW ಸಿಸ್ಟಮ್ ಹೊಂದಿರುವ ಗ್ರಾಹಕ ತಾನು ಒಂದು ಯೂನಿಟ್ ವಿದ್ಯುತ್ ಬಳಸದೇ ಇದ್ದರೂ ತಿಂಗಳಿಗೆ ಕನಿಷ್ಠ ₹750 ರಿಂದ ₹800 ರಷ್ಟು ಹಣವನ್ನು ಸರ್ಕಾರಕ್ಕೆ ಪಾವತಿಸಲೇಬೇಕು.

​ಅತ್ಯಂತ ಆಶ್ಚರ್ಯಕರ ಮತ್ತು ಅವೈಜ್ಞಾನಿಕ ಸಂಗತಿಯೆಂದರೆ, ನೀವು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ, ಹಗಲಿಡೀ ಸರ್ಕಾರಕ್ಕೆ ವಿದ್ಯುತ್ ಸರಬರಾಜು ಮಾಡುವ ‘ಮೈಕ್ರೋ ಜನರೇಟರ್’ ಆಗಿ ಬದಲಾಗಿದ್ದರೂ, ನೀವು ನೀಡಿದ ಹೆಚ್ಚುವರಿ ವಿದ್ಯುತ್‌ನ ಮೌಲ್ಯದಿಂದ ಈ ಸ್ಥಿರ ಶುಲ್ಕವನ್ನು ಕಡಿತಗೊಳಿಸಲು (Adjust) ನಮ್ಮ ಇಂದಿನ ನೆಟ್-ಮೀಟರಿಂಗ್ ನಿಯಮಗಳಲ್ಲಿ ಅವಕಾಶವೇ ಇಲ್ಲ! ಯೂನಿಟ್‌ಗಳ ಲೆಕ್ಕಾಚಾರವೇ ಬೇರೆ, ಸ್ಥಿರ ಶುಲ್ಕದ ಲೆಕ್ಕಾಚಾರವೇ ಬೇರೆ ಎಂಬ ಸರ್ಕಾರದ ಈ ಏಕಪಕ್ಷೀಯ ಮತ್ತು ಶೋಷಣಾತ್ಮಕ ನೀತಿಯು ಗ್ರಾಹಕರಿಗೆ ಭ್ರಮನಿರಸನ ಉಂಟುಮಾಡುತ್ತಿದೆ.

(ನಿಮ್ಮ ಹೆಚ್ಚುವರಿ ಮಾರಾಟವಾದ ವಿದ್ಯುತ್ ನಲ್ಲಿ ಈ ಮೊತ್ತ ಕಡಿತಗೊಂಡು ಶೂನ್ಯ ಬಿಲ್ ಬರಬಹುದಾದರೂ ಇದು ನಷ್ಟ ಅಂತ consider ಆಗುತ್ತೆ ).

ಸ್ವಂತ ಖರ್ಚಿನಲ್ಲಿ ವಿದ್ಯುತ್ ತಯಾರಿಸಿ ದೇಶದ ಇಂಧನ ಕೊರತೆಯನ್ನು ನೀಗಿಸುತ್ತಿರುವ ನಾಗರಿಕನಿಗೆ ಪ್ರೋತ್ಸಾಹ ಕೊಡುವ ಬದಲು, ‘ಲೋಡ್’ ಹೆಸರಿನಲ್ಲಿ ದಂಡ ವಿಧಿಸುವ ಈ ಪದ್ಧತಿಯು ‘ಪಿಎಂ ಸೂರ್ಯಘರ್’ ಯೋಜನೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತಿದೆ.

3) ಮೊದಲೇ ಲಕ್ಷಾಂತರ ರೂಪಾಯಿ ಹೂಡಿಕೆ, ಕಮಿಷನಿಂಗ್ ವಿಳಂಬ ಮತ್ತು ಸಬ್ಸಿಡಿಗಾಗಿ ಸುದೀರ್ಘ ಕಾಯುವಿಕೆ!

​’ಪಿಎಂ ಸೂರ್ಯಘರ್’ ಯೋಜನೆಯಡಿ ಸರ್ಕಾರವು ಭಾರಿ ಪ್ರಮಾಣದ ಆರ್ಥಿಕ ನೆರವು ಅಥವಾ ಸಬ್ಸಿಡಿಯನ್ನು ನೀಡುತ್ತದೆ ಎನ್ನುವುದು ಕಾಗದದ ಮೇಲಿರುವ ಆಕರ್ಷಕ ಸತ್ಯ. ಆದರೆ, ಈ ಸಬ್ಸಿಡಿ ವಿತರಣೆಯ ಹಿಂದೆ ಇರುವ ಪ್ರಕ್ರಿಯೆಯು ಮಧ್ಯಮ ಮತ್ತು ಕೆಳವರ್ಗದ ಕುಟುಂಬಗಳ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ರೂಪಿತವಾಗಿಲ್ಲ. ಪ್ರಸ್ತುತ ನಿಯಮಗಳ ಪ್ರಕಾರ, ಗ್ರಾಹಕನು ಸಬ್ಸಿಡಿ ಕಡಿತವಾಗಿ ಉಳಿದ ಮೊತ್ತವನ್ನು ಮಾತ್ರ ಪಾವತಿಸುವಂತಿಲ್ಲ. ಬದಲಾಗಿ, ಇಡೀ ಸಿಸ್ಟಮ್‌ನ ಸಂಪೂರ್ಣ ವೆಚ್ಚವನ್ನು (Upfront Capital Cost) ಮೊದಲಿಗೆ ತನ್ನ ಸ್ವಂತ ಜೇಬಿನಿಂದಲೇ ಇನ್‌ಸ್ಟಾಲರ್‌ಗಳಿಗೆ ಪಾವತಿಸಬೇಕಾಗುತ್ತದೆ. ಒಂದು ಸಾಮಾನ್ಯ 3kW ನಿಂದ 5kW ಸಿಸ್ಟಮ್ ಅಳವಡಿಸಲು ತಕ್ಷಣಕ್ಕೆ ಒಂದು ಒಂದೂವರೆ ಲಕ್ಷದಿಂದ ಎರಡು ಲಕ್ಷದವರೆಗೆ ದೊಡ್ಡ ಮೊತ್ತದ ಹಣವನ್ನು ಒಟ್ಟುಗೂಡಿಸುವುದು ಬಡ ಅಥವಾ ಮಧ್ಯಮ ವರ್ಗದ ಜನರಿಗೆ ಸುಲಭದ ಮಾತಲ್ಲ. ಬ್ಯಾಂಕ್‌ಗಳ ಮೂಲಕ ಸಿಗುವ ಸಾಲ ಸೌಲಭ್ಯಗಳೂ ಕೂಡ (ಕೆಲವು ಕಡೆ) ಸಾಮಾನ್ಯ ಜನರಿಗೆ ಅಷ್ಟು ಸುಲಭವಾಗಿ ಮತ್ತು ಶೀಘ್ರವಾಗಿ ಸಿಗುತ್ತಿಲ್ಲ.

​ಇದಕ್ಕಿಂತ ದೊಡ್ಡ ಪ್ರಾಯೋಗಿಕ ಹಿನ್ನಡೆಯೆಂದರೆ, ಗ್ರಾಹಕನು ಹೇಗೋ ಕಷ್ಟಪಟ್ಟು ಹಣ ಹೊಂದಿಸಿ ತನ್ನ ಮನೆಯ ಮೇಲ್ಛಾವಣಿಯ ಮೇಲೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿದ ನಂತರ ಎದುರಾಗುವ ಅಧಿಕಾರಶಾಹಿಯ ವಿಳಂಬ ನೀತಿ. ಸಿಸ್ಟಮ್ ರೆಡಿಯಾದ ತಕ್ಷಣ ವಿದ್ಯುತ್ ಉತ್ಪಾದನೆ ಆರಂಭವಾಗುವುದಿಲ್ಲ.  ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿಯ (ಮೆಸ್ಕಾಂ/ಕೆಇಬಿ) ಅಧಿಕಾರಿಗಳು ಗ್ರಾಹಕನ ಮನೆಗೆ ಬಂದು, ಇಡೀ ವೈರಿಂಗ್ ವ್ಯವಸ್ಥೆಯನ್ನು ತಾಂತ್ರಿಕವಾಗಿ ಪರಿಶೀಲಿಸಿ, ಹಳೆಯ ಮೀಟರ್ ಅನ್ನು ತೆಗೆದು ಹೊಸ ‘ನೆಟ್ ಮೀಟರ್’ (Net Meter) ಅಳವಡಿಸಬೇಕು. ಈ ಇಡೀ ಪ್ರಕ್ರಿಯೆಗೆ ಮತ್ತು ಇಲಾಖೆಯಿಂದ ಅಧಿಕೃತ ‘ಕಮಿಷನಿಂಗ್ ಸರ್ಟಿಫಿಕೇಟ್’ (Commissioning Certificate) ಸಿಗಲು ವಾರಗಟ್ಟಲೆ, ಕೆಲವು ಕಡೆ ತಿಂಗಳುಗಟ್ಟಲೆ ಗ್ರಾಹಕರು ಇಲಾಖೆಯ ಸುತ್ತ ಅಲೆಯಬೇಕಾಗುತ್ತದೆ.

​ಈ ಕಮಿಷನಿಂಗ್ ಸರ್ಟಿಫಿಕೇಟ್ ಅಧಿಕೃತ ರಾಷ್ಟ್ರೀಯ ಪೋರ್ಟಲ್‌ನಲ್ಲಿ ಅಪ್‌ಲೋಡ್ ಆದ ನಂತರವೇ ಸರ್ಕಾರದ ಸಬ್ಸಿಡಿ ಪ್ರಕ್ರಿಯೆ ಚಾಲನೆಗೆ ಬರುತ್ತದೆ. ಅಲ್ಲಿಂದ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ (DBT – Direct Benefit Transfer) ಆಗಲು ಮತ್ತೆ 30 ರಿಂದ 45 ದಿನಗಳ ಸುದೀರ್ಘ ಕಾಯುವಿಕೆ ಅನಿವಾರ್ಯ. ಅಲ್ಲಿಯವರೆಗೆ ಗ್ರಾಹಕನ ದೊಡ್ಡ ಮೊತ್ತದ ಹೂಡಿಕೆಯು ಯಾವುದೇ ರಿಟರ್ನ್ಸ್ ಇಲ್ಲದೆ ಲಾಕ್ ಆಗಿರುತ್ತದೆ. ಇಂತಹ ಸುದೀರ್ಘ, ಸಂಕೀರ್ಣ ಮತ್ತು ಕೆಂಪು ಪಟ್ಟಿಯ (Bureaucratic hurdles) ಆಡಳಿತಾತ್ಮಕ ವಿಳಂಬಗಳ ಕಾರಣದಿಂದಾಗಿಯೇ ತಳಮಟ್ಟದ ಸಾರ್ವಜನಿಕರು ಈ ಯೋಜನೆಗೆ ಕೈಹಾಕಲು ತೀವ್ರವಾಗಿ ಹಿಂಜರಿಯುತ್ತಿದ್ದಾರೆ.

4) ನಾವು ಖರೀದಿ ಮಾಡುವಾಗ ಚಿನ್ನದ ಬೆಲೆ, ಸರಕಾರಕ್ಕೆ ಉತ್ಪಾದಿಸಿ ಮಾರಾಟ ಮಾಡುವಾಗ ಮಾತ್ರ ಕಸದ ಬೆಲೆ!

​ಇದು ಇಡೀ ಸೌರಶಕ್ತಿ ನೀತಿಯಲ್ಲಿರುವ ಅತ್ಯಂತ ಆಘಾತಕಾರಿ ಮತ್ತು ಮುಕ್ತ ಮಾರುಕಟ್ಟೆಯ ನಿಯಮಗಳಿಗೇ ಬಾಹಿರವಾಗಿರುವ ಇಬ್ಬಂದಿ ನೀತಿಯಾಗಿದೆ. ಒಬ್ಬ ಸಾಮಾನ್ಯ ನಾಗರಿಕ ತನ್ನ ದೈನಂದಿನ ದೀಪ, ಫ್ಯಾನ್ ಅಥವಾ ಎಸಿ ನಡೆಸಲು ವಿದ್ಯುತ್ ಕಂಪನಿಗಳಿಂದ (ಮೆಸ್ಕಾಂ/ಕೆಇಬಿ) ವಿದ್ಯುತ್ ಖರೀದಿ ಮಾಡುವಾಗ ಪ್ರತಿ ಯೂನಿಟ್‌ಗೆ ಸ್ಲ್ಯಾಬ್‌ಗಳ ಆಧಾರದ ಮೇಲೆ ಸುಮಾರು 7 ರಿಂದ 9 ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚು ಪಾವತಿಸಬೇಕಾಗುತ್ತದೆ. ಆದರೆ, ಅದೇ ನಾಗರಿಕ ತನ್ನ ಸ್ವಂತ ಜಾಗದಲ್ಲಿ, ಸ್ವಂತ ಆಸ್ತಿಯನ್ನು ಹೂಡಿಕೆ ಮಾಡಿ, ಅಷ್ಟೇ ಶುದ್ಧ ಮತ್ತು ಅಷ್ಟೇ ಗುಣಮಟ್ಟದ ವೋಲ್ಟೇಜ್ ಇರುವ ವಿದ್ಯುತ್ ಅನ್ನು ಸೌರಶಕ್ತಿಯ ಮೂಲಕ ಉತ್ಪಾದಿಸಿ ಸರಕಾರದ ಗ್ರಿಡ್‌ಗೆ ಮಾರಾಟ ಮಾಡಿದರೆ, ಆತನಿಗೆ ಸಿಗುವ ಒಪ್ಪಂದದ ದರ ಕೇವಲ 2.70 ರೂ. ನಿಂದ 2.90 ರೂ. ಮಾತ್ರ!

ಅಂದರೆ, ನಾವು ಕೊಳ್ಳುವಾಗ ದುಬಾರಿ ಬೆಲೆ, ಅದೇ ವಸ್ತುವನ್ನು ನಾವೇ ಕಷ್ಟಪಟ್ಟು ತಯಾರಿಸಿ ಸರಕಾರಕ್ಕೆ ಕೊಡುವಾಗ ಮಾತ್ರ ಅತಿ ಅಗ್ಗದ ದರ.

​ಇದಕ್ಕಿಂತಲೂ ಗಂಭೀರವಾದ ಮತ್ತೊಂದು ಅಂಶವೆಂದರೆ, ಈ ದರ ಒಪ್ಪಂದವು (PPA – Power Purchase Agreement) ಮುಂದಿನ 25 ವರ್ಷಗಳ ಸುದೀರ್ಘ ಅವಧಿಗೆ ಸ್ಥಿರವಾಗಿರುತ್ತದೆ (Flat Rate). ಒಮ್ಮೆ ಯೋಚಿಸಿ, ಇಂದಿನ ಆರ್ಥಿಕ ಪರಿಸ್ಥಿತಿಯಲ್ಲೇ ಯೂನಿಟ್‌ಗೆ 2.70 ರೂಪಾಯಿ ಎನ್ನುವುದು ಅತ್ಯಂತ ಅಲ್ಪ ಮೊತ್ತವಾಗಿದೆ. ಇನ್ನು 20 ಅಥವಾ 25 ವರ್ಷಗಳ ನಂತರ ದೇಶದ ಹಣದುಬ್ಬರ (Inflation) ಎಲ್ಲೋ ತಲುಪಿರುತ್ತದೆ, ರೂಪಾಯಿಯ ಮೌಲ್ಯ ಕುಸಿದಿರುತ್ತದೆ ಮತ್ತು ಅಂದಿನ ಪರಿಸ್ಥಿತಿಗೆ ತಕ್ಕಂತೆ ವಿದ್ಯುತ್ ಕಂಪನಿಗಳು ಸಾರ್ವಜನಿಕರಿಗೆ ಮಾರುವ ವಿದ್ಯುತ್ ದರ ಬಹುಶಃ ಯೂನಿಟ್‌ಗೆ 15 ರಿಂದ 20 ರೂಪಾಯಿ ದಾಟಿರಬಹುದು! ಆದರೆ, ಅಂದು ಕೂಡ ನಮ್ಮ ಸೋಲಾರ್ ಪ್ಯಾನಲ್‌ಗಳು ಉತ್ಪಾದಿಸುವ ವಿದ್ಯುತ್‌ಗೆ ಸರಕಾರ ನಮಗೆ ಕೊಡುವುದು ಇದೇ 2.70 ರೂಪಾಯಿಗಳನ್ನು ಮಾತ್ರ. ಭವಿಷ್ಯದ ಆರ್ಥಿಕ ಏರಿಳಿತಗಳನ್ನು ಮತ್ತು ಹಣದುಬ್ಬರವನ್ನು ಲೆಕ್ಕ ಹಾಕದೆ, ಗ್ರಾಹಕನಿಗೆ ದೀರ್ಘಕಾಲದಲ್ಲಿ ಭಾರಿ ನಷ್ಟವನ್ನುಂಟು ಮಾಡುವ ಇಂತಹ ದೋಷಪೂರಿತ ಮತ್ತು ಏಕಪಕ್ಷೀಯ ದರ ನೀತಿಗಳೇ ಈ ಯೋಜನೆಯು ಹಳ್ಳ ಹಿಡಿಯಲು ಮುಖ್ಯ ಕಾರಣವಾಗಿದೆ.

5) ಇತರ ರಾಜ್ಯಗಳಂತೆ ನಮ್ಮ ರಾಜ್ಯ ಸರ್ಕಾರದ ಪ್ರೋತ್ಸಾಹದ ಹಸ್ತವಿಲ್ಲದೇ ಇರುವುದು!

​ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ಬೃಹತ್ ಕೇಂದ್ರ ಪುರಸ್ಕೃತ ಯೋಜನೆ ತಳಮಟ್ಟದಲ್ಲಿ ಯಶಸ್ವಿಯಾಗಬೇಕಾದರೆ ಅದಕ್ಕೆ ಆಯಾ ರಾಜ್ಯ ಸರ್ಕಾರಗಳ ಸಕ್ರಿಯ ಸಹಭಾಗಿತ್ವ ಮತ್ತು ಹೆಚ್ಚುವರಿ ಪ್ರೋತ್ಸಾಹ ಅತ್ಯಂತ ಅನಿವಾರ್ಯವಾಗುತ್ತದೆ. ‘ಪಿಎಂ ಸೂರ್ಯಘರ್’ ಯೋಜನೆಯ ವೇಗವನ್ನು ದೇಶದಾದ್ಯಂತ ಗಮನಿಸಿದರೆ, ಯಾವ ರಾಜ್ಯಗಳು ತಮ್ಮ ಕಡೆಯಿಂದಲೂ ನಾಗರಿಕರಿಗೆ ಆರ್ಥಿಕ ಬೆಂಬಲ ನೀಡಿವೆಯೋ ಅಲ್ಲಿ ಈ ಯೋಜನೆ ಅತ್ಯಂತ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

ಉದಾಹರಣೆಗೆ, ಉತ್ತರ ಪ್ರದೇಶ ಸರ್ಕಾರವು ಕೇಂದ್ರದ ಸಬ್ಸಿಡಿಯ ಜೊತೆಗೆ ತನ್ನ ರಾಜ್ಯದ ನಾಗರಿಕರಿಗೆ ಹೆಚ್ಚುವರಿಯಾಗಿ ₹20,000 ವರೆಗೆ ಪ್ರೋತ್ಸಾಹಕ ಧನವನ್ನು ನೀಡುತ್ತಿದೆ. ಇನ್ನು ಪ್ರವಾಸೋದ್ಯಮ ಆಧಾರಿತ ಪುಟ್ಟ ರಾಜ್ಯವಾದ ಗೋವಾ ಸರ್ಕಾರವು ತನ್ನ ಗ್ರಾಹಕರಿಗೆ ಬರೋಬ್ಬರಿ ₹30,000 ಗಳ ಹೆಚ್ಚುವರಿ ರಾಜ್ಯ ಸಬ್ಸಿಡಿಯನ್ನು ನೇರವಾಗಿ ಘೋಷಿಸಿದೆ. ಇಂತಹ ನೀತಿಗಳಿಂದಾಗಿ ಆಯಾ ರಾಜ್ಯಗಳ ಜನಸಾಮಾನ್ಯರಿಗೆ ಸೋಲಾರ್ ಅಳವಡಿಕೆಯ ಆರಂಭಿಕ ಬಂಡವಾಳದ ಹೊರೆ ಅರ್ಧಕ್ಕರ್ಧ ಕಡಿಮೆಯಾಗುತ್ತಿದೆ.

​ಆದರೆ ನಮ್ಮ ಕರ್ನಾಟಕ ರಾಜ್ಯದ ವಿಷಯಕ್ಕೆ ಬಂದರೆ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ. ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಇಂತಹ ಯಾವುದೇ ಹೆಚ್ಚುವರಿ ಆರ್ಥಿಕ ಸಪೋರ್ಟ್ ಅಥವಾ ಪ್ರೋತ್ಸಾಹಕ ಧನ ಸಿಗುತ್ತಿಲ್ಲ. ಕೇಂದ್ರದ ಸಬ್ಸಿಡಿ ದೊಡ್ಡದಾಗಿದ್ದರೂ, ಕರಾವಳಿ ಮತ್ತು ಮಲೆನಾಡಿನಂತಹ ವಿಶಿಷ್ಟ ಹವಾಮಾನ ಹೊಂದಿರುವ ನಮ್ಮ ಭಾಗದ ಜನರಿಗೆ ಗಟ್ಟಿಯಾದ ಸ್ಟ್ರಕ್ಚರ್ ಮತ್ತು ಗುಣಮಟ್ಟದ ಉಪಕರಣಗಳನ್ನು ಅಳವಡಿಸಲು ತಗಲುವ ಒಟ್ಟು ವೆಚ್ಚವನ್ನು ಸರಿದೂಗಿಸಲು ಈ ಕೇಂದ್ರದ ಹಣವೊಂದೇ ಸಾಕಾಗುತ್ತಿಲ್ಲ. ಇತರ ರಾಜ್ಯಗಳು ಸೌರಶಕ್ತಿಯನ್ನು ಒಂದು ದೀರ್ಘಕಾಲದ ಪರಿಸರ ಪೂರಕ ಹೂಡಿಕೆಯಾಗಿ ನೋಡಿ ತಮ್ಮ ಬಜೆಟ್‌ನಲ್ಲಿ ಹಣ ಮೀಸಲಿಡುತ್ತಿದ್ದರೆ, ನಮ್ಮ ರಾಜ್ಯ ಸರ್ಕಾರವು ಇಂಧನ ಕ್ಷೇತ್ರದಲ್ಲಿ ಕೇವಲ ಉಚಿತ ಯೋಜನೆಗಳ ನಿರ್ವಹಣೆಗೆ ಆದ್ಯತೆ ನೀಡುತ್ತಿದೆಯೇ ಹೊರತು, ನಾಗರಿಕರನ್ನು ಉತ್ಪಾದಕರನ್ನಾಗಿ ಮಾಡುವ ಇಂತಹ ಸುಸ್ಥಿರ ಯೋಜನೆಗಳಿಗೆ ಕೈಜೋಡಿಸುತ್ತಿಲ್ಲ. ಈ ರಾಜಕೀಯ ಮತ್ತು ನೀತಿ ನಿರೂಪಣೆಯ ಉದಾಸೀನತೆಯೇ ನಮ್ಮ ರಾಜ್ಯದಲ್ಲಿ ಈ ಯೋಜನೆ ಕುಂಟುತ್ತಾ ಸಾಗಲು ಪ್ರಮುಖ ಕಾರಣವಾಗಿದೆ.

6) ಪತ್ರಿಕೆ, ಟಿವಿಗಳಲ್ಲಿ ಕೋಟ್ಯಂತರ ರೂಪಾಯಿ ಜಾಹೀರಾತು, ಆದರೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಶೂನ್ಯ ಜಾಗೃತಿ!

​ಯಾವುದೇ ಒಂದು ಸರ್ಕಾರಿ ಯೋಜನೆ ಯಶಸ್ವಿಯಾಗಬೇಕಾದರೆ ಅದರ ಅರಿವು ಕೇವಲ ನಗರದ ಜನರಿಗಷ್ಟೇ ಅಲ್ಲ, ಗ್ರಾಮೀಣ ಭಾಗದ ಕಟ್ಟಕಡೆಯ ಪ್ರಜೆಗೂ ತಲುಪಬೇಕು. ಆದರೆ, ‘ಪಿಎಂ ಸೂರ್ಯಘರ್’ ಯೋಜನೆಯ ಪ್ರಚಾರದ ಶೈಲಿಯನ್ನು ನೋಡಿದರೆ ಸರ್ಕಾರಗಳು ಎಡವಿರುವುದು ಎದ್ದು ಕಾಣುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದ ದೊಡ್ಡ ಪತ್ರಿಕೆಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಈ ಯೋಜನೆಯ ಬಗ್ಗೆ ಕೋಟ್ಯಂತರ ರೂಪಾಯಿ ವೆಚ್ಚದ ಬೃಹತ್ ಜಾಹೀರಾತುಗಳನ್ನು ನೀಡಲಾಗುತ್ತಿದೆ. ಆದರೆ, ಇಂತಹ ಗರಿಷ್ಠ ವೆಚ್ಚದ ಪ್ರಚಾರಗಳು ಕೇವಲ ತಾಂತ್ರಿಕವಾಗಿ ಮುಂದುವರಿದಿರುವ ನಗರವಾಸಿಗಳ ಗಮನ ಸೆಳೆಯುತ್ತಿವೆಯೇ ಹೊರತು, ನಿಜವಾದ ವಿದ್ಯುತ್ ಕೊರತೆ ಮತ್ತು ಪವರ್ ಕಟ್ ಸಮಸ್ಯೆಗಳನ್ನು ದಿನನಿತ್ಯ ಎದುರಿಸುತ್ತಿರುವ ಗ್ರಾಮೀಣ ಜನಸಾಮಾನ್ಯರನ್ನು ತಲುಪುತ್ತಿಲ್ಲ.

​ಇದರ ಪ್ರಾಯೋಗಿಕ ಮಿತಿಯೇನೆಂದರೆ, ಗ್ರಾಮೀಣ ಭಾಗದ ಜನರಿಗೆ ಸೋಲಾರ್ ತಂತ್ರಜ್ಞಾನದ ಬಗ್ಗೆ ಇಂದಿಗೂ ನೂರಾರು ಗೊಂದಲಗಳಿವೆ. ಯಾವ ಪ್ಯಾನಲ್ ಆರಿಸಬೇಕು, ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದು ಹೇಗೆ, ಸಬ್ಸಿಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಏನು ಎಂಬ ಸರಿಯಾದ ತಾಂತ್ರಿಕ ತಿಳುವಳಿಕೆ ಅವರಲ್ಲಿಲ್ಲ. ನಮ್ಮ ಆಡಳಿತ ವ್ಯವಸ್ಥೆಯ ತಳಹದಿಯಾದ ‘ಗ್ರಾಮ ಪಂಚಾಯತ್’ ಮಟ್ಟದಲ್ಲಿ ಜನರಿಗೆ ಗೈಡ್ ಮಾಡಲು, ಮಾಹಿತಿ ನೀಡಲು ಅಥವಾ ಅನುಮಾನಗಳನ್ನು ಬಗೆಹರಿಸಲು ಕನಿಷ್ಠ ಒಂದು ಪುಟ್ಟ ಮಾಹಿತಿ ಕೇಂದ್ರ ಅಥವಾ ಹೆಲ್ಪ್ ಡೆಸ್ಕ್ ಕೂಡ ಇಲ್ಲ. ಸ್ಥಳೀಯ ಮಟ್ಟದಲ್ಲಿ ಜನರಿಗೆ ವಿಶ್ವಾಸಾರ್ಹವಾದ ಮಾರ್ಗದರ್ಶನ ನೀಡುವ ವ್ಯವಸ್ಥೆಯೇ ಇಲ್ಲದಿರುವಾಗ, ಕೇವಲ ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿ ಹಳ್ಳಿಯ ಸಾಮಾನ್ಯ ರೈತರಾಗಲಿ ಅಥವಾ ಮಧ್ಯಮ ವರ್ಗದವರಾಗಲಿ ಲಕ್ಷಾಂತರ ರೂಪಾಯಿಗಳ ಹೂಡಿಕೆಗೆ ಮುಂದೆ ಬರಲು ಹೇಗೆ ಸಾಧ್ಯ? ಈ ತಳಮಟ್ಟದ ಸಂವಹನ ಕೊರತೆಯೇ ಯೋಜನೆಯ ಪ್ರಗತಿಗೆ ದೊಡ್ಡ ಹಿನ್ನಡೆಯಾಗಿದೆ.

7) ದೇಶದ ಕಟ್ಟಕಡೆಯ ಜನರಿಗೆ ಬೇಕಿರುವ ‘ಆಫ್-ಗ್ರಿಡ್’ ಯೋಜನೆಗೆ ಸರಕಾರದ ಸಬ್ಸಿಡಿ ಇಲ್ಲದೇ ಇರುವುದು!

​ಯಾವುದೇ ಒಂದು ಕಲ್ಯಾಣ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯ ನಿಜವಾದ ಅಗತ್ಯ ಮತ್ತು ಫಲ ಸಿಗಬೇಕಿರುವುದು ದೇಶದ ಭೌಗೋಳಿಕವಾಗಿ ಅತ್ಯಂತ ಹಿಂದುಳಿದ, ದುರ್ಗಮ ಪ್ರದೇಶಗಳಲ್ಲಿ ವಾಸಿಸುವ ಕಟ್ಟಕಡೆಯ ಜನಸಾಮಾನ್ಯನಿಗೆ. ಇಂದಿಗೂ ನಮ್ಮ ದೇಶದ ಮತ್ತು ರಾಜ್ಯದ ಅದೆಷ್ಟೋ ಅತಿ ಗ್ರಾಮೀಣ ಭಾಗದ ಹಳ್ಳಿಗಳು, ಕಾಡಿನ ಅಂಚಿನಲ್ಲಿರುವ ರಿಮೋಟ್ ಏರಿಯಾಗಳು ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ಸರಕಾರದ ಅಧಿಕೃತ ವಿದ್ಯುತ್ ಲೈನ್ ತಲುಪಿಯೇ ಇಲ್ಲ. ತಲುಪಿದ್ದರೂ ಅಲ್ಲಿ ದಿನದಲ್ಲಿ 20 ಗಂಟೆ ಪವರ್ ಕಟ್ ಇರುತ್ತದೆ. ಇಂತಹ ಕತ್ತಲಲ್ಲಿ ಕರಗುತ್ತಿರುವ ಬಡ ಕುಟುಂಬಗಳ ಜೀವನಕ್ಕೆ, ಬ್ಯಾಟರಿ ಆಧಾರಿತ ‘ಆಫ್-ಗ್ರಿಡ್’ (Off-Grid) ಸೋಲಾರ್ ವ್ಯವಸ್ಥೆಯು ನಿಜಕ್ಕೂ ಒಂದು ದೇವರ ವರದಾನವಿದ್ದಂತೆ. ಏಕೆಂದರೆ ಇದು ಸರಕಾರದ ವಿದ್ಯುತ್ ಲೈನ್‌ನ ಹಂಗಿಲ್ಲದೆ, ಹಗಲಿಡೀ ಸೂರ್ಯನ ಬೆಳಕಿನಿಂದ ಬ್ಯಾಟರಿಗಳನ್ನು ಚಾರ್ಜ್ ಮಾಡಿಕೊಂಡು, ರಾತ್ರಿಯಿಡೀ ಇಡೀ ಮನೆಗೆ ಬೆಳಕನ್ನು ನೀಡಬಲ್ಲ ಸಂಪೂರ್ಣ ಸ್ವತಂತ್ರ ತಂತ್ರಜ್ಞಾನವಾಗಿದೆ.

​ಆದರೆ, ಅತ್ಯಂತ ದುರದೃಷ್ಟದ ಮತ್ತು ಆಘಾತಕಾರಿ ಸಂಗತಿಯೆಂದರೆ, ಕೇಂದ್ರ ಸರಕಾರದ ‘ಪಿಎಂ ಸೂರ್ಯಘರ್’ ಯೋಜನೆಯಡಿ ಇಂತಹ ಅತ್ಯಗತ್ಯವಾಗಿರುವ ‘ಆಫ್-ಗ್ರಿಡ್’ ಸೋಲಾರ್ ಸಿಸ್ಟಮ್‌ಗಳಿಗೆ ನಯಾಪೈಸೆ ಸಬ್ಸಿಡಿಯೂ ದೊರೆಯುವುದಿಲ್ಲ! ಸರಕಾರದ ನಿಯಮಗಳ ಪ್ರಕಾರ, ಸಬ್ಸಿಡಿ ಸಿಗಬೇಕಾದರೆ ನಿಮ್ಮ ಮನೆಯ ಸೋಲಾರ್ ಸಿಸ್ಟಮ್ ಕಡ್ಡಾಯವಾಗಿ ಸರಕಾರದ ಗ್ರಿಡ್ ಲೈನ್‌ಗೆ (On-Grid ಅಥವಾ Hybrid) ಕನೆಕ್ಟ್ ಆಗಿರಲೇಬೇಕು. ಈಗ ಯೋಚಿಸಿ, ಯಾವ ಹಳ್ಳಿಗೆ ವಿದ್ಯುತ್ ಕಂಬಗಳೇ ತಲುಪಿಲ್ಲವೋ, ಅಲ್ಲಿನ ಬಡ ನಾಗರಿಕ ನೆಟ್-ಮೀಟರ್ ಅಳವಡಿಸಲು ಗ್ರಿಡ್ ಲೈನ್ ಅನ್ನು ಎಲ್ಲಿಂದ ತರಬೇಕು? ಯಾರಿಗೆ ವಿದ್ಯುತ್ ಸ್ವಾವಲಂಬನೆಯ ಅತಿ ತುರ್ತು ಅಗತ್ಯವಿದೆಯೋ, ಅವರನ್ನೇ ಈ ಯೋಜನೆಯಿಂದ ಹೊರಗಿಡುವ ಇಂತಹ ದೋಷಪೂರಿತ ನೀತಿಗಳು ಸರಕಾರದ ಇಂಧನ ಕ್ರಾಂತಿಯ ಘೋಷಣೆಯನ್ನು ಅಣಕಿಸುವಂತಿದೆ. ಶ್ರೀಮಂತರು ಮತ್ತು ನಗರವಾಸಿಗಳು ಸುಲಭವಾಗಿ ಗ್ರಿಡ್ ಸಂಪರ್ಕ ಪಡೆದು ಸಬ್ಸಿಡಿ ಲೂಟಿ ಮಾಡುತ್ತಿದ್ದರೆ, ಹಳ್ಳಿಯ ಬಡವ ಮಾತ್ರ ಬ್ಯಾಟರಿ ಸಹಿತ ಆಫ್-ಗ್ರಿಡ್ ಕೊಳ್ಳಲು ಲಕ್ಷಾಂತರ ರೂಪಾಯಿ ಸಾಲದ ಸುಳಿಗೆ ಸಿಲುಕಬೇಕಾಗಿದೆ. ಸರಕಾರದ ಈ ತಾರತಮ್ಯದ ಧೋರಣೆಯೇ ಈ ಯೋಜನೆ ಹಳ್ಳಿಗಳನ್ನು ತಲುಪದೇ ಇರಲು ಅತ್ಯಂತ ಬಲವಾದ ಕಾರಣವಾಗಿದೆ.

ನಾವು ಅತ್ಯಂತ ಗಂಭೀರವಾಗಿ ಯೋಚಿಸಬೇಕಾದ ಒಂದು ಕಹಿ ಸತ್ಯ ಇಲ್ಲಿದೆ. ಇಂದು ನಮ್ಮ ಸರಕಾರಗಳು ಹೊರಗಿನಿಂದ ಕೋಟ್ಯಂತರ ರೂಪಾಯಿಗಳ ಭಾರಿ ಮೊತ್ತವನ್ನು ಕೊಟ್ಟು ಕಲ್ಲಿದ್ದಲು (Thermal Power) ಮುಂತಾದ ಪರಿಸರಕ್ಕೆ ತೀವ್ರ ಮಾರಕವಾಗಿರುವ ಮತ್ತು ಮಾಲಿನ್ಯ ಉಂಟುಮಾಡುವ ಮೂಲಗಳಿಂದ ವಿದ್ಯುತ್ ಅನ್ನು ಖರೀದಿ ಮಾಡುತ್ತವೆ. ಹಾಗೆ ದುಬಾರಿ ಬೆಲೆಗೆ ಕೊಂಡ ವಿದ್ಯುತ್ ಅನ್ನು ಜನರಿಗೆ ‘ಉಚಿತ’ ಎಂದು ಹಂಚಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತವೆ. ಇದರ ಬದಲು ಸರಕಾರಗಳು ಸ್ವಲ್ಪ ದೂರದೃಷ್ಟಿ ಇಟ್ಟು, ಆ ಖರೀದಿಗೆ ಬಳಸುವ ಹಣದ ಅರ್ಧದಷ್ಟು ಮೊತ್ತವನ್ನು ಮುಂಗಡವಾಗಿ ಹೂಡಿಕೆ ಮಾಡಿ, ಒಂದು ವಿಶೇಷ ಯೋಜನೆಯಡಿಯಲ್ಲಿ ಪ್ರತಿಯೊಂದು ನಾಗರಿಕನ ಮನೆಗೂ ‘ಸಂಪೂರ್ಣ ಉಚಿತ ಸೋಲಾರ್ ವ್ಯವಸ್ಥೆ’ಯನ್ನು ಅಳವಡಿಸಿಕೊಟ್ಟರೆ ಏನಾಗಬಹುದು?

​ಹಾಗೆ ಮಾಡಿದರೆ ದೇಶದ ಪ್ರತಿಯೊಬ್ಬ ಪ್ರಜೆಯೂ ಇಂಧನ ಕ್ಷೇತ್ರದಲ್ಲಿ ಶಾಶ್ವತವಾಗಿ ಸ್ವಾವಲಂಬಿಯಾಗುತ್ತಾನೆ, ತನ್ನ ಮನೆಗೆ ಬೇಕಾದ ವಿದ್ಯುತ್ ಅನ್ನು ತಾನೇ ಉತ್ಪಾದಿಸಿಕೊಳ್ಳುತ್ತಾನೆ. ಇದರಿಂದಾಗಿ ಸರಕಾರದ ವಿದ್ಯುತ್ ಸಂಸ್ಥೆಗಳ ಮೇಲಿರುವ ಭಾರಿ ಉತ್ಪಾದನಾ ಒತ್ತಡ ಮತ್ತು ವಿತರಣಾ ನಷ್ಟಗಳು (Transmission Losses) ತಾವಾಗಿಯೇ ಇಲ್ಲವಾಗುತ್ತವೆ. ಇನ್ನು ಕರಾವಳಿ ಮತ್ತು ಮಲೆನಾಡಿನ ಹವಾಮಾನವನ್ನು ಲೆಕ್ಕ ಹಾಕಿದರೆ, ಕೇವಲ ಮಳೆಗಾಲದ 3-4 ತಿಂಗಳುಗಳಲ್ಲಿ ಮಾತ್ರ ಸೋಲಾರ್ ಉತ್ಪಾದನೆ ಕಡಿಮೆಯಾಗುವುದರಿಂದ ಸರಕಾರ ಸ್ವಲ್ಪ ಹೆಚ್ಚಿನ ಪ್ರಮಾಣದ ವಿದ್ಯುತ್ ಪೂರೈಕೆ ಮಾಡಬೇಕಾಗಬಹುದು. ಆದರೆ ಪ್ರಕೃತಿಯ ನಿಯಮದಂತೆ, ಆ ಸೀಸನ್‌ನಲ್ಲಿ ವಾತಾವರಣ ತಂಪಾಗಿರುವುದರಿಂದ ಮನೆಗಳಲ್ಲಿ ಫ್ಯಾನ್, ಎಸಿ ಅಥವಾ ಕೃಷಿ ಪಂಪ್‌ಸೆಟ್‌ಗಳ ಬಳಕೆ ತೀರಾ ಕಡಿಮೆ ಇರುತ್ತದೆ. ಅಂದರೆ ಇಡೀ ದೇಶದಲ್ಲಿ ವಿದ್ಯುತ್ ಒಟ್ಟಾರೆ ಬೇಡಿಕೆಯೇ (Peak Demand) ಗಣನೀಯವಾಗಿ ಕುಸಿದಿರುತ್ತದೆ! ಇದನ್ನು ನಿಭಾಯಿಸುವುದು ಸರಕಾರಕ್ಕೆ ಅತ್ಯಂತ ಸುಲಭದ ಮಾತು. ಸರಕಾರಗಳು ಕೇವಲ ತಾತ್ಕಾಲಿಕ ಉಚಿತಗಳ ಹಿಂದೆ ಓಡುವುದನ್ನು ಬಿಟ್ಟು, ಇಂತಹ ಶಾಶ್ವತ ಮತ್ತು ಸುಸ್ಥಿರ ಸೌರ ಕ್ರಾಂತಿಗೆ ಕೈಹಾಕಿದಾಗ ಮಾತ್ರ ದೇಶಕ್ಕೆ ಮತ್ತು ಪರಿಸರಕ್ಕೆ ನಿಜವಾದ ಮುಕ್ತಿ ಸಿಗಲು ಸಾಧ್ಯ.

ಆಗ ಈ “200 ಯೂನಿಟ್ ಉಚಿತ ವಿದ್ಯುತ್” ಅನ್ನೋ ಯೋಜನೆಯೇ ಅಗತ್ಯವಿರುವುದಿಲ್ಲ.

ಕೇಂದ್ರ ಸರ್ಕಾರದ ಈ ಯೋಜನೆಯ ಮೂಲ ಉದ್ದೇಶ ಮತ್ತು ದೂರದೃಷ್ಟಿ ಅತ್ಯಂತ ಶ್ಲಾಘನೀಯವಾದುದು. ಆದರೆ, ಸರ್ಕಾರಗಳು ಕೇವಲ ಕಾಗದದ ಮೇಲೆ ಸಬ್ಸಿಡಿ ಘೋಷಿಸಿ, ಮಾಧ್ಯಮಗಳಲ್ಲಿ ಪ್ರಚಾರ ನೀಡಿದರೆ ಸಾಲದು. ಆನ್-ಗ್ರಿಡ್ ವ್ಯವಸ್ಥೆಯ ತಾಂತ್ರಿಕ ಮಿತಿಗಳನ್ನು ನೀಗಿಸಲು  ಆಫ್ ಗ್ರಿಡ್ ಸಿಸ್ಟಮ್‌ಗಳಿಗೂ ಪ್ರತ್ಯೇಕ ಪ್ರೋತ್ಸಾಹ ನೀಡಬೇಕು, ಅವೈಜ್ಞಾನಿಕ ಸ್ಥಿರ ಶುಲ್ಕಗಳನ್ನು (Fixed Charges) ರದ್ದುಪಡಿಸಬೇಕು, ಖರೀದಿ ಮತ್ತು ಮಾರಾಟ ದರಗಳ ನಡುವಿನ ತಾರತಮ್ಯವನ್ನು ಸರಿಪಡಿಸಬೇಕು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನರಿಗೆ ನೇರ ತಾಂತ್ರಿಕ ನೆರವು ನೀಡಬೇಕು. ಇಂತಹ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಾಗ ಮಾತ್ರ ಪ್ರತಿಯೊಬ್ಬ ನಾಗರಿಕನೂ ಇಂಧನ ಕ್ಷೇತ್ರದಲ್ಲಿ ನಿಜವಾದ ಸ್ವಾವಲಂಬಿಯಾಗಲು ಸಾಧ್ಯ.

ಎಂ. ಕೃಷ್ಣಪ್ರಸಾದ್ ಭಟ್ ಮದ್ದಡ್

Leave a Comment