Home ನಿಮಗೆ ಗೊತ್ತಾ ಜಿರಲೆಗಳ ಮೂಲ ಭಾರತ

ಜಿರಲೆಗಳ ಮೂಲ ಭಾರತ

ಮುನ್ನೂರು ಮಿಲಿಯನ್ ವರ್ಷಗಳ ಹಿಂದೆಯೇ ವಿಕಾಸಗೊಂಡಿದ್ದ ಜೀವಿ

by Editor
– ಉದಯ ಗಾಂವ್ಕರ್ 

ಜಗತ್ತಿನ ಎಲ್ಲ ದೇಶಗಳ ಮಾನವ ನಿರ್ಮಿತ ಕಟ್ಟಡಗಳಲ್ಲಿ ಕಂಡುಬರುವ ಜರ್ಮನ್ ಜಿರಳೆ ಎಂಬ ನಗರ ಕೀಟ ಭಾರತ ಮೂಲದ್ದು.

ಬ್ಲಾಟೆಲ್ಲಾ ಜರ್ಮನಿಕ ಎಂಬ ವೈಜ್ಞಾನಿಕ ಹೆಸರಿನ ಈ ಜಿರಲೆ ಬಹುತೇಕ ನಗರವಾಸಿ. ನೀವದನ್ನು ನಗರ ನಕ್ಸಲ್‌ ಎಂದು ಕೂಡ ಕರೆಯಬಹುದು.

ಇದರ ಪೂರ್ವಜರು ಸುಮಾರು ಮುನ್ನೂರು ಮಿಲಿಯ ವರ್ಷಗಳ ಹಿಂದೆ, ಅಂದರೆ ಜುರಾಸಿಕ್‌ ಯುಗದ ಅಂತ್ಯದಲ್ಲಿ, ಡೈನೋಸಾರುಗಳೆಲ್ಲ ಹೇಳ ಹೆಸರಿಲ್ಲದೆ ಹೋಗುವ ಮೊದಲೇ ವಿಕಾಸಗೊಂಡಿದ್ದವು. ಆ ನಂತರ ಅವು ಅಂಟಾರ್ಟಿಕಾವೊಂದನ್ನು ಬಿಟ್ಟು ಎಲ್ಲೆಡೆಯೂ ಹರಡಿದವು. ಗಿಡಹೇನುಗಳಂತೆ ಇವುಗಳ ಬಾಯಲ್ಲಿ ಹೀರುವ ಭಾಗಗಳಿಲ್ಲ. ಇವುಗಳ ನಂತರ ಭೂಮಿಯಲ್ಲಿ ವಿಕಾಸಗೊಂಡ ಹಲವು ಕೀಟಗಳಿಗಿರುವ ಅನೇಕ ಜೈವಿಕ ಅನುಕೂಲತೆಗಳು ಇಲ್ಲದಿದ್ದರೂ ಇವು ಅಣುಯುದ್ಧದಲ್ಲೂ ನಾಶಗೊಳ್ಳದೆ ಬದುಕುಳಿಯಬಲ್ಲವು. ಜಿರಳೆಗಳಲ್ಲಿ ನಾಲ್ಕುವರೆ ಸಾವಿರ ಪ್ರಬೇಧಗಳಿವೆಯಾದರೂ ಮನುಷ್ಯನ ಜೊತೆ ಇಪ್ಪತ್ತೈದರಿಂದ ಮೂವತ್ತು ಪ್ರಬೇಧದ ಜಿರಳೆಗಳಷ್ಟೇ ವಾಸಿಸುತ್ತವೆ. ಅವುಗಳಲ್ಲಿ ನಗರ ನಕ್ಸಲನಾದ ಜರ್ಮನ್‌ ಜಿರಳೆ ನಮ್ಮ ದೇಶದ್ದು. ಇಲ್ಲಿಂದಲೇ ಯುರೋಪು, ಅಮೇರಿಕಾಗಳಿಗೆ ಪಯಣಿಸಿ ಅಲ್ಲೆಲ್ಲ ತನ್ನ ಛಾಪು ಮೂಡಿಸಿರುವ ಪ್ರಬೇಧವಿದು.
ಇದು ಇಂಡಿಯನ್‌ ಜಿರಳೆ ಎನ್ನುತ್ತೀರಿ, ಆದರೆ ಹೆಸರಲ್ಲೇಕೆ ಜರ್ಮನಿ ಇದೆ ಎಂದು ನೀವು ಕೇಳದೇ ಇದ್ದರೂ ಹೇಳುತ್ತೇನೆ ಕೇಳಿ-
ಜೀವಿಗಳನ್ನು ದ್ವಿನಾಮಕರಣ ಪದ್ಧತಿಯಿಂದ ಗುರುತಿಸುವ ವಿಧಾನವನ್ನು ಆರಂಭಿಸಿದ ವಿಜ್ಞಾನಿ ಕಾರ್ಲ್‌ ಲಿನೇಯಸ್‌ ಈ ಜಿರಲೆಯ ಮಾದರಿಯನ್ನು ಜರ್ಮನಿಯಲ್ಲಿ ಸಂಗ್ರಹಿಸಿದ್ದರಿಂದ ಇದಕ್ಕೆ ಬ್ಲಾಟೆಲ್ಲಾ ಜರ್ಮಾನಿಕಾ ಎಂಬ ಹೆಸರಿಟ್ಟರು. ಬ್ಲಾಟೆಲ್ಲ ಅಂದರೆ ಬೆಳಕಿಗೆ ಹೆದರುವ ಎಂದರ್ಥ. ಹತ್ತಿರ ಹತ್ತಿರ ಎರಡು ಸಾವಿರ ವರ್ಷಗಳಿಂದಲೇ ನಮ್ಮೂರುಗಳಲ್ಲಿ ವಾಸಿಸಿದ್ದ ಈ ಜಿರಳೆ ಇಂಗ್ಲೆಂಡಿಗೆ ಪ್ರಯಾಣಿಸಿದ್ದು ತೀರಾ ಇತ್ತೀಚೆಗೆ. ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ.. ಈಗ ಅದು ಎಲ್ಲ ದೇಶಗಳಲ್ಲೂ ಇದೆ.

ನಿರುದ್ಯೋಗದಿಂದಾಗಿ ಈ ಜಿರಳೆಗಳೆಲ್ಲ ಆರ್‌ ಟಿ ಐ ಕಾರ್ಯಕತರಾಗಿವೆ. ಸರ್ಕಾರವನ್ನು ಪ್ರಶ್ನಿಸುತ್ತಿವೆ ಎಂದೆಲ್ಲ ನೀವು ಆರೋಪಿಸಬಹುದು. ಆದರೆ, ಅವುಗಳನ್ನು ಭಯಪಡಿಸಲಾಗದು. ಇದುವರೆಗಿನ ಯಾವ ಕೀಟನಾಶಕವೂ ಜರ್ಮನ್‌ ಜಿರಳೆಗಳನ್ನು ಗೆದ್ದಿಲ್ಲ. ನೀವು ಅವುಗಳ ಟ್ವಿಟರ್‌ ಹ್ಯಾಂಡಲ್‌ ಅಮಾನತುಮಾಡಬಹುದು. ಸೋಷಿಯಲ್‌ ಮೀಡಿಯಾ ಪುಟಗಳನ್ನು ನಾಶಪಡಿಸಬಹುದು. ಆದರೆ, ಸಮುದಾಯವಾಗಿ ಅವುಗಳನ್ನು ಮರೆಮಾಡಲಾಗದು.

 

(ಲೇಖಕ ಉದಯ ಗಾಂವ್ಕರ್ ಅವರು ವೃತ್ತಿಯಲ್ಲಿ ಶಿಕ್ಷಕರು. ಜನ ವಿಜ್ಞಾನ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಪ್ರಸ್ತುತ ಭಾರತ ಜ್ಞಾನ ವಿಜ್ಞಾನ ಸಮಿತಿಯ ಕರ್ನಾಟಕ ರಾಜ್ಯ ಸಮಿತಿ  ಹೊರತರುವ ವಿಜ್ಞಾನ ಮಾಸಪತ್ರಿಕೆ ಟೀಚರ್ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. )

You may also like

Leave a Comment