Home ನಿಮಗೆ ಗೊತ್ತಾ ಕ್ಯೂ ಆರ್ ಕೋಡ್ ಉದಯಿಸಿದ್ದು ಹೀಗೆ!

ಕ್ಯೂ ಆರ್ ಕೋಡ್ ಉದಯಿಸಿದ್ದು ಹೀಗೆ!

ಕಪ್ಪು ಬಿಳಿ ಚೌಕಗಳಲ್ಲಿ ಅಡಗಿಸಿಡಬಹುದು ಅಗಾಧ ಮಾಹಿತಿ

by Editor

ಇಂದು ನಾವು ಚಿಲ್ಲರೆ ಅಂಗಡಿಯಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್‌ಗಳವರೆಗೆ ಎಲ್ಲೇ ಹೋದರೂ ಕಪ್ಪು-ಬಿಳಿ ಚೌಕಗಳಿರುವ ಆ ಒಂದು ಪುಟ್ಟ ಚಿತ್ರ ನಮಗೆ ಸ್ವಾಗತ ಕೋರುತ್ತದೆ. ಅದೇ QR ಕೋಡ್. ಜಗತ್ತಿನಾದ್ಯಂತ ಕೋಟ್ಯಾಂತರ ಸಣ್ಣ- ದೊಡ್ಡ ವ್ಯಾಪಾರಿಗಳಿಗೆ ಶೀಘ್ರ ವ್ಯವಹಾರ ಮುಗಿಸಲು ಆಪತ್ಬಾಂಧವ ಆಗಿರುವ ಈ ಪುಟ್ಟ ಚೌಕ ತಂತ್ರಜ್ಞಾನದ ಹಿಂದೆ ಇರುವುದು ಜಪಾನಿನ ಇಂಜಿನಿಯರ್ “ಮಸಾಹಿರೋ ಹರ”.

1994 ರಲ್ಲಿ ಮಸಾಹಿರೋ ಹರ ಅವರು ಪ್ರಸಿದ್ಧ ಟೊಯೋಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಡೆನ್ಸೋ ವೇವ್ ಕಂಪನಿಯಲ್ಲಿ ಎಲೆಕ್ಟ್ರಿಕ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದಾಗ, ಸಾಂಪ್ರದಾಯಿಕ ಬಾರ್‌ಕೋಡ್‌ಗಳ ಮಿತಿಯನ್ನು ಕಂಡು ಅಸಮಾಧಾನಗೊಂಡಿದ್ದರು. ಒಂದು ದಿನ ಅವರು ಬಿಡುವಿನ ವೇಳೆಯಲ್ಲಿ ಜಪಾನಿನ ಪ್ರಸಿದ್ಧ ಆಟ ‘ಗೋ’ (Go) ಆಡುತ್ತಿದ್ದಾಗ, ಆ ಬೋರ್ಡ್ ಮೇಲಿರುವ ಬಿಳಿ ಮತ್ತು ಕಪ್ಪು ಕಲ್ಲುಗಳ ವಿನ್ಯಾಸವನ್ನು ಕಂಡು, “ಮಾಹಿತಿಯನ್ನು ಹೀಗೆ ದ್ವಿಪರಿಮಾಣದಲ್ಲಿ ಯಾಕೆ ಸಂಗ್ರಹಿಸಬಾರದು?” ಎಂದು ಯೋಚಿಸಿದರು. ಅದೇ ಕ್ಷಣ Quick Response Code (QR Code) ಕೋಡ್ ಜನ್ಮತಾಳಿತು.

QR ಕೋಡ್‌ನ ವಿಶೇಷತೆಗಳು ::

ಸಾಮಾನ್ಯ ಬಾರ್‌ಕೋಡ್‌ಗಳು ಕೇವಲ ಅಡ್ಡಲಾಗಿ (Horizontal) ಮಾಹಿತಿ ನೀಡಿದರೆ, QR ಕೋಡ್ ಅಡ್ಡ ಮತ್ತು ಲಂಬ (Vertical) ಎರಡೂ  ದಿಕ್ಕುಗಳಲ್ಲಿ ಅದಕ್ಕಿಂತ ನೂರಾರು ಪಟ್ಟು ಹೆಚ್ಚು ಮಾಹಿತಿಯನ್ನು ಸಂಗ್ರಹಿಸುತ್ತದೆ.

QR ಕೋಡ್‌ನ ಮೂಲೆಗಳಲ್ಲಿ ನೀವು ಮೂರು ದೊಡ್ಡ ಚೌಕಗಳನ್ನು ಗಮನಿಸಬಹುದು. ಇವು ಸ್ಕ್ಯಾನರ್‌ಗೆ ಕೋಡ್‌ನ ದಿಕ್ಕನ್ನು ಗುರುತಿಸಲು ಸಹಾಯ ಮಾಡುತ್ತವೆ. ನೀವು ಫೋನ್ ಅನ್ನು ಹೇಗೆ ಹಿಡಿದರೂ ಇವುಗಳ ಸಹಾಯದಿಂದ ಕೋಡ್ ಸರಿಯಾಗಿ ಸ್ಕ್ಯಾನ್ ಆಗುತ್ತದೆ.

ಕ್ಯಾಮೆರಾ ಸ್ಕ್ಯಾನ್ ಮಾಡಿದಾಗ, ಬಿಳಿ ಚೌಕಗಳನ್ನು ‘0’ ಮತ್ತು ಕಪ್ಪು ಚೌಕಗಳನ್ನು ‘1’ ಎಂದು ಕಂಪ್ಯೂಟರ್ ಭಾಷೆಯಲ್ಲಿ ಅರ್ಥೈಸಿಕೊಳ್ಳುತ್ತದೆ. ಈ ಅಂಕಿಗಳ ಗುಂಪು ನಿರ್ದಿಷ್ಟ ವೆಬ್‌ಸೈಟ್ ಲಿಂಕ್ ಅಥವಾ ಪಾವತಿಯ ಮಾಹಿತಿಯನ್ನು ತೆರೆಯುತ್ತದೆ.

QR ಕೋಡ್‌ನಲ್ಲಿ ಮತ್ತೊಂದು ವಿಶೇಷ ಗುಣವಿದೆ. ಕೋಡ್‌ನ ಸ್ವಲ್ಪ ಭಾಗ ಹರಿದುಹೋಗಿದ್ದರೂ ಅಥವಾ ಕೊಳೆಯಾಗಿದ್ದರೂ (ಸುಮಾರು 30% ವರೆಗೆ), ಅದರಲ್ಲಿರುವ ‘ರೀಡ್-ಸೋಲೋಮನ್’ ಎಂಬ ತಂತ್ರಜ್ಞಾನದಿಂದಾಗಿ ಅದು ಸರಿಯಾದ ಮಾಹಿತಿಯನ್ನೇ ನೀಡುತ್ತದೆ.

ಹರ ಅವರ ಈ ಆವಿಷ್ಕಾರವು ಅವರಿಗೆ ಕೋಟ್ಯಂತರ ರೂಪಾಯಿ ತಂದುಕೊಡಬಲ್ಲ ಪೇಟೆಂಟ್ ಹೊಂದಿತ್ತು. ಆದರೆ, ಈ ತಂತ್ರಜ್ಞಾನವು ಜಗತ್ತಿನ ಎಲ್ಲರಿಗೂ ತಲುಪಬೇಕು ಎಂಬ ಉದಾತ್ತ ಉದ್ದೇಶದಿಂದ ಅವರು ಅದನ್ನು ಮುಕ್ತವಾಗಿ (Open Source) ಬಿಟ್ಟರು. ಅವರು ಅಂದು ಪೇಟೆಂಟ್ ಹಕ್ಕು ಪಡೆಯದಿರುವುದೇ ಇಂದು ಜಗತ್ತಿನಾದ್ಯಂತ ನಾವು ಉಚಿತವಾಗಿ ಡಿಜಿಟಲ್ ಪಾವತಿ ಮಾಡಲು ಸಾಧ್ಯವಾಗಿರುವುದು.

ಜಪಾನಿನ ಬಹುತೇಕ ಜನರಂತೆ ಮಸಾಹಿರೋ ಹರ ಅವರು ಪ್ರಚಾರದಿಂದ ದೂರವಿರಲು ಬಯಸುವ ವ್ಯಕ್ತಿ. ಅವರು ತಮ್ಮ ಪತ್ನಿ ಅಥವಾ ಮಕ್ಕಳ ಹೆಸರನ್ನು ಸಾರ್ವಜನಿಕವಾಗಿ ಎಲ್ಲಿಯೂ ಬಹಿರಂಗಪಡಿಸಿಲ್ಲ.

ಇಷ್ಟೊಂದು ದೊಡ್ಡ ಆವಿಷ್ಕಾರ ಮಾಡಿದರೂ, ಅವರು ಇಂದಿಗೂ  ಜಪಾನ್‌ನಲ್ಲಿ ಅತ್ಯಂತ ಸರಳ ಜೀವನವನ್ನು ನಡೆಸುತ್ತಿದ್ದಾರೆ .

ಅವರು ತಮ್ಮ ಆವಿಷ್ಕಾರಕ್ಕೆ ಪೇಟೆಂಟ್ ಹಕ್ಕುಗಳನ್ನು ಚಲಾಯಿಸದೆ ಇಡೀ ಜಗತ್ತಿಗೆ ಉಚಿತವಾಗಿ ನೀಡಿದ್ದಕ್ಕಾಗಿ ಜಗತ್ತಿನಾದ್ಯಂತ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕಾಂಟ್ಯಾಕ್ಟ್‌ಲೆಸ್ ಪಾವತಿ ಮತ್ತು ವ್ಯಾಕ್ಸಿನ್ ಸರ್ಟಿಫಿಕೇಟ್‌ಗಳಿಗಾಗಿ QR ಕೋಡ್ ಅತಿ ಹೆಚ್ಚು ಬಳಕೆಯಾದಾಗ, ಹರ ಅವರ ಹೆಸರು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಯಿತು.

‘ಮಸಾಹಿರೋ ಹರ’ ಅವರು ಇಂದಿಗೂ ಅದೇ ಸರಳತೆಯೊಂದಿಗೆ ಅದೇ ಕಂಪೆನಿಯಲ್ಲಿ ಎಲ್ಲರಲ್ಲಿ ಒಬ್ಬರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು  “ನನ್ನ ಆವಿಷ್ಕಾರ ಜನಸಾಮಾನ್ಯರ ಜೀವನವನ್ನು ಸುಲಭಗೊಳಿಸಿದೆ ಎನ್ನುವುದೇ ನನಗೆ ಸಿಕ್ಕ ದೊಡ್ಡ ಪ್ರಶಸ್ತಿ” ಎನ್ನುವ ಇವರ ನುಡಿ ಮತ್ತು ನಡೆ ಇಂದಿನ ತಾಂತ್ರಿಕ ಜಗತ್ತಿಗೆ ಮಾದರಿ. ಭಾರತದ ಡಿಜಿಟಲ್/ಯುಪಿಐ (UPI) ಕ್ರಾಂತಿಗೆ ಬೆನ್ನೆಲುಬಾಗಿ ನಿಂತಿರುವ ಈ ತಂತ್ರಜ್ಞಾನದ ಅನ್ವೇಷಕನನ್ನು ನಾವು ಎಷ್ಟು ಹೊಗಳಿದರೂ ಸಾಲದು.

 

You may also like

Leave a Comment