Home ರಾಜ್ಯ ಕಾಡಾನೆ ಸಮಸ್ಯೆ ಪರಿಹಾರಕ್ಕೆ ಟಾಸ್ಕ್ ಪೋರ್ಸ್ ರಚನೆ:  ಸಚಿವ ಕೃಷ್ಣಬೈರೇಗೌಡ

ಕಾಡಾನೆ ಸಮಸ್ಯೆ ಪರಿಹಾರಕ್ಕೆ ಟಾಸ್ಕ್ ಪೋರ್ಸ್ ರಚನೆ:  ಸಚಿವ ಕೃಷ್ಣಬೈರೇಗೌಡ

ಬಿಎಂ ರಸ್ತೆ ಕಾಮಗಾರಿ, ಎತ್ತಿನಹೊಳೆ ಚೆಕ್‌ಡ್ಯಾಂ ನಿರ್ಮಾಣದಿಂದ ಆನೆ ಕಾರಿಡಾರ್ ಗೆ ಅಡ್ಡಿ

by Editor

ಹಾಸನ: ಜಿಲ್ಲೆಯಲ್ಲಿನ ಹೆಚ್ಚುತ್ತಿರುವ ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆರು ತಿಂಗಳಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರಲ್ಲಿ ಕಾಡಾನೆ ದಾಳಿಯಿಂದ 6 ಮಂದಿ ಸಾವನ್ನಪ್ಪಿದ್ದರೆ, ಕಳೆದ ವರ್ಷ ಈ ಸಂಖ್ಯೆ 3ಕ್ಕೆ ಇಳಿಕೆಯಾಗಿದೆ. ಈ ವರ್ಷ ಬೇಲೂರು ಭಾಗದಲ್ಲಿ ಈಗಾಗಲೇ ಒಂದು ಸಾವು ಸಂಭವಿಸಿದೆ. ಕಾಡಾನೆ ಸಮಸ್ಯೆ ಪರಿಹಾರಕ್ಕಾಗಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಘಟನೆಗಳು ನಡೆಯದಂತೆ ತಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಕಾಡಾನೆಗಳ ಚಲನವಲನವನ್ನು ನಿಖರವಾಗಿ ಊಹಿಸುವುದು ಕಷ್ಟವೆಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಬಿಎಂ ರಸ್ತೆ ಕಾಮಗಾರಿ ಮತ್ತು ಎತ್ತಿನಹೊಳೆ ಚೆಕ್‌ಡ್ಯಾಂ ನಿರ್ಮಾಣದಿಂದ ಆನೆಗಳ ಮೈಗ್ರೇಷನ್ ಮಾರ್ಗಕ್ಕೆ ಅಡ್ಡಿಯಾಗಿದ್ದು, ಗ್ರಾಮಗಳತ್ತ ಅವುಗಳ ಓಡಾಟ ಹೆಚ್ಚಾಗಿದೆ. ಹಳೆಯ ಮಾರ್ಗಗಳು ಮುಚ್ಚಲ್ಪಟ್ಟ ಕಾರಣ, ಹೊಸ ರಸ್ತೆಗಳನ್ನು ಬಳಸಿ ಗ್ರಾಮಗಳಿಗೆ ಪ್ರವೇಶಿಸುತ್ತಿವೆ ಇದರಿಂದ ಸಮಸ್ಯೆ ಮುಂದುವರಿದಿದೆ ಎಂದು ಸಚಿವರು ತಿಳಿಸಿದರು.

1981ರಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಾಣಹಾನಿ ಹಾಗೂ ಬೆಳೆಹಾನಿ ಸಂಭವಿಸಿದಾಗ ಜನರಿಗೆ ಉತ್ತರ ನೀಡುವುದು ಕಷ್ಟವಾಗಿದೆ. ಅಡಿಕೆ ಹಾಗೂ ಕಾಫಿ ತೋಟಗಳಿಗೆ ಹಾನಿಯಾದರೆ ಪುನಃ ಬೆಳೆ ಬೆಳೆಸಲು ವರ್ಷಗಳೇ ಬೇಕಾಗುತ್ತದೆ. ಸಮಸ್ಯೆ ತಡೆಗಟ್ಟಲು ಸರ್ಕಾರ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಈಗಾಗಲೇ 35 ಕಿಲೋಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಗೊಂಡಿದ್ದು, ಇನ್ನೂ ಕೆಲವು ಭಾಗಗಳಲ್ಲಿ ಕಾಮಗಾರಿ ಬಾಕಿಯಿದೆ.
ಕೆಲವು ಕಾಡಾನೆಗಳನ್ನು ಸ್ಥಳಾಂತರಿಸಬೇಕೆಂಬ ಜನರ ಬೇಡಿಕೆಗೆ ಸಂಬಂಧಿಸಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಅನುಮತಿ ಸಿಕ್ಕಿಲ್ಲ. ಇದೀಗ ಹೈಕೋರ್ಟ್ ಮಾರ್ಗಸೂಚಿಗಳಂತೆ ಸಾಫ್ಟ್ ರಿಲೀಸ್‌ ಸೆಂಟ‌ರ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ 6 ತಿಂಗಳಲ್ಲಿ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವ ಕಾರ್ಯ ಆರಂಭವಾಗಲಿದೆ. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

You may also like

Leave a Comment