Home ರಾಜ್ಯ ಮೇ 29ರಿಂದ ಶಾಲಾ-ಕಾಲೇಜುಗಳ ಆರಂಭ

ಮೇ 29ರಿಂದ ಶಾಲಾ-ಕಾಲೇಜುಗಳ ಆರಂಭ

ಅಕ್ಟೋಬರ್ 2 ರಿಂದ ಅಕ್ಟೋಬರ್ 22  ರವರೆಗೆ ದಸರಾ ರಜೆ 

by Editor

ರಾಜ್ಯ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಶಿಕ್ಷಣ ಇಲಾಖೆ ಪ್ರಕಟಿಸಿರುವ 2026-27ರ ಶೈಕ್ಷಣಿಕ ಮಾರ್ಗಸೂಚಿಯ ಪ್ರಕಾರ, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಮೇ 29, 2026 ರಂದು ಪುನರಾರಂಭಗೊಳ್ಳಲಿವೆ.

ಪ್ರಸ್ತುತ ಪ್ರಕಟವಾಗಿರುವ ಕ್ಯಾಲೆಂಡರ್ ಪ್ರಕಾರ, ವಿದ್ಯಾರ್ಥಿಗಳಿಗೆ ಮೇ 28 ರವರೆಗೆ ಬೇಸಿಗೆ ರಜೆ ಇರಲಿದೆ. ಮೇ 29 ರಂದು ಅಧಿಕೃತವಾಗಿ ತರಗತಿಗಳು ಶುರುವಾಗಲಿವೆ. ಮೊದಲನೇ ಶೈಕ್ಷಣಿಕ ಅವಧಿಯು ಮೇ 29 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದೆ. ಅದಾದ ಬಳಿಕ ವಿದ್ಯಾರ್ಥಿಗಳಿಗೆ ದಸರಾ ಹಬ್ಬದ ಪ್ರಯುಕ್ತ ಸುಮಾರು 18 ದಿನಗಳ ಕಾಲ ದೀರ್ಘಾವಧಿ ರಜೆ ಸಿಗಲಿದೆ. ಎರಡನೇ ಅವಧಿಯು ಅಕ್ಟೋಬರ್ 22 ರಿಂದ ಆರಂಭವಾಗಿ, 2027 ರ ಏಪ್ರಿಲ್ ವರೆಗೆ ಮುಂದುವರಿಯಲಿದ್ದು, ಆ ಬಳಿಕ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ.

245 ದಿನಗಳ ಶೈಕ್ಷಣಿಕ ಕಾರ್ಯನಿರ್ವಹಣೆ

ಹೊಸ ಕ್ಯಾಲೆಂಡರ್ ಪ್ರಕಾರ, ವರ್ಷದ 365 ದಿನಗಳಲ್ಲಿ ಒಟ್ಟು 245 ದಿನಗಳನ್ನು ಶಾಲಾ ಕರ್ತವ್ಯದ ದಿನಗಳಾಗಿ ನಿಗದಿಪಡಿಸಲಾಗಿದೆ. ಇದರಲ್ಲಿ 181 ದಿನಗಳನ್ನು ಕೇವಲ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗಾಗಿ ಕಾಯ್ದಿರಿಸಲಾಗಿದ್ದು, ಉಳಿದ ದಿನಗಳನ್ನು ಪಠ್ಯೇತರ ಚಟುವಟಿಕೆಗಳು, ಕ್ರೀಡೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಮೀಸಲಿಡಲಾಗಿದೆ.

ಜೂನ್ 30 ರೊಳಗೆ ಎಲ್ಲಾ ಶಾಲಾ ಪ್ರವೇಶಾತಿ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಶಾಲೆ ಬಿಟ್ಟ ಮಕ್ಕಳಿಗಾಗಿ ವಿಶೇಷ ಅಭಿಯಾನ

ಈ ವರ್ಷ ಶಿಕ್ಷಣ ಇಲಾಖೆಯು ಮತ್ತೊಂದು ಪ್ರಮುಖ ಹೆಜ್ಜೆಯನ್ನಿಟ್ಟಿದ್ದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ. 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ, ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಪ್ರತಿಯೊಂದು ಮಗುವಿಗೂ ಕಡ್ಡಾಯ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಈ ಹೊಸ ಶೈಕ್ಷಣಿಕ ವರ್ಷದಲ್ಲಿ ಈ ಯೋಜನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

2026-27ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಈಗಾಗಲೇ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಮೇ 4 ರಿಂದ 28 ರವರೆಗೆ ಬೇಸಿಗೆ ರಜೆ ಘೋಷಿಸಿದೆ. ಮೇ 29 ರಿಂದ ರಾಜ್ಯಾದ್ಯಂತ ಎಲ್ಲಾ ಶಾಲೆಗಳು ತಮ್ಮ ಕಾರ್ಯಚಟುವಟಿಕೆಯನ್ನು ಆರಂಭಿಸಲಿವೆ. 18 ದಿನಗಳ ದಸರಾ ರಜೆ, 245 ಕೆಲಸದ ದಿನಗಳು ಸೇರಿದಂತೆ ಸುಸಜ್ಜಿತ ಕ್ಯಾಲೆಂಡರ್ ಅನ್ನು ರೂಪಿಸಲಾಗಿದೆ.

You may also like

Leave a Comment