ಹಾಸನ: ಕೇಂದ್ರ ಚುನಾವಣಾ ಆಯೋಗ ಜಾರಿಗೊಳಿಸಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆ ದೇಶದ ಅನೇಕ ನಾಗರಿಕರ ಅಸ್ತಿತ್ವ ಮತ್ತು ಪೌರತ್ವವನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಜೀಷಾನ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಎಸ್‌ಐಆರ್ ಪ್ರಕ್ರಿಯೆ ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆ ಎನ್ನುವುದಕ್ಕಿಂತ ಹೆಚ್ಚಾಗಿ ನಾಗರಿಕರು ತಮ್ಮ ಅಸ್ತಿತ್ವ ಮತ್ತು ಪೌರತ್ವವನ್ನು ಮತ್ತೆ ಸಾಬೀತುಪಡಿಸಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ” ಎಂದು ಹೇಳಿದ್ದಾರೆ.
“ವಿಶೇಷವಾಗಿ ಅಲೆಮಾರಿ ಸಮುದಾಯಗಳು, ಲಂಬಾಣಿ ಜನಾಂಗ, ಆದಿವಾಸಿಗಳು ಹಾಗೂ ಸಮಾಜದ ಅಂಚಿನಲ್ಲಿರುವ ವರ್ಗಗಳ ಸ್ಥಿತಿ ಅತ್ಯಂತ ಸಂಕಷ್ಟಕರವಾಗಿದೆ. ಈ ಸಮುದಾಯಗಳ ಅನೇಕ ಜನರ ಬಳಿ ಜನನ ಪ್ರಮಾಣಪತ್ರ, ಶಾಲಾ ದಾಖಲಾತಿ ಅಥವಾ ಇತರ ಅಧಿಕೃತ ದಾಖಲೆಗಳು ಇಲ್ಲ. ಅಂತಹವರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ದಾಖಲೆಗಳನ್ನು ಸಲ್ಲಿಸಿ ತಮ್ಮ ಗುರುತು ಮತ್ತು ಪೌರತ್ವವನ್ನು ಸಾಬೀತುಪಡಿಸುವುದು ಸುಲಭದ ಮಾತಲ್ಲ .
– ಜೀಷಾನ ಖಾನ್
ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ
ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಈ ಹಿಂದೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ಸ್ಥಳೀಯ ಮಟ್ಟದಲ್ಲಿ ಮಾಹಿತಿಗಳನ್ನು ಸಂಗ್ರಹಿಸಿ, ಮತದಾರರ ವಿವರಗಳನ್ನು ನಿಖರವಾಗಿ ದಾಖಲಿಸುವ ಪ್ರಯತ್ನಗಳೂ ನಡೆಯುತ್ತಿದ್ದವು. ಆದರೆ ಈ ಬಾರಿ ಆ ರೀತಿಯ ಸಮಗ್ರ ಪರಿಶೀಲನೆ ನಡೆದಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸರಿಯಾದ ಸಮೀಕ್ಷೆ ಮತ್ತು ಪರಿಶೀಲನೆ ನಡೆಸದೇ ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂಬ ಆತಂಕವೂ ಹೆಚ್ಚಾಗಿದೆ” .ಹಿಂದೆ ಮತದಾರರ ದಾಖಲೆಗಳಲ್ಲಿ ಅಥವಾ ವೈಯಕ್ತಿಕ ಮಾಹಿತಿಗಳಲ್ಲಿ ವ್ಯತ್ಯಾಸ ಕಂಡುಬಂದ ಸಂದರ್ಭಗಳಲ್ಲಿ ನಾಗರಿಕರಿಗೆ ಅಫಿಡವಿಟ್ ಸಲ್ಲಿಸುವುದು, ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡುವುದು ಹಾಗೂ ಇತರೆ ಕಾನೂನು ಪ್ರಕ್ರಿಯೆಗಳ ಮೂಲಕ ತಿದ್ದುಪಡಿ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಂತಹ ಅವಕಾಶಗಳೇ ಸೀಮಿತವಾಗಿವೆ ಅಥವಾ ಲಭ್ಯವಿಲ್ಲ ಎಂಬ ಆತಂಕಗಳು ವ್ಯಕ್ತವಾಗಿವೆ. ಈ ಬೆಳವಣಿಗೆಗಳು ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಉದ್ದೇಶಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ” ಎಂದು ಜೀಷಾನ್ ಖಾನ್ ಹೇಳಿದ್ದಾರೆ.

