Home ರಾಜ್ಯ ಸೆ. 27: ಹಾಸನದಲ್ಲಿ  ‘ನಾನೇಕೆ ನಾಸ್ತಿಕ’ 3ನೇ ವೈಚಾರಿಕ ಸಮಾವೇಶ

ಸೆ. 27: ಹಾಸನದಲ್ಲಿ  ‘ನಾನೇಕೆ ನಾಸ್ತಿಕ’ 3ನೇ ವೈಚಾರಿಕ ಸಮಾವೇಶ

ಭಗತ್ ಸಿಂಗ್ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮ

by Editor

ಹಾಸನ: ಸ್ವಾತಂತ್ರ್ಯ ಚಳವಳಿಯ ಧ್ರುವತಾರೆ, ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಎಂಬ ಆಶಯದೊಂದಿಗೆ ಮೂರನೇ ರಾಜ್ಯಮಟ್ಟದ ವೈಚಾರಿಕ ಸಂವಾದ ಸಮಾವೇಶವನ್ನು ಸೆಪ್ಟೆಂಬರ್ 27ರ ಭಾನುವಾರ ಹಾಸನದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಭಗತ್ ಸಿಂಗ್ ಜನ್ಮದಿನಾಚರಣಾ ಸಮಿತಿ ತಿಳಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್,  ಭಗತ್ ಸಿಂಗ್ ತಮ್ಮ ಕಾಲದಲ್ಲಿಯೇ ಸ್ವಾತಂತ್ರ್ಯ ಎಂದರೆ ಕೇವಲ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆಯುವುದಷ್ಟೇ ಅಲ್ಲ; ಜಾತಿ ಅಸಮಾನತೆ, ವರ್ಗ ಅಸಮಾನತೆ ಮತ್ತು ಶೋಷಣೆಗಳಿಂದ ಮುಕ್ತವಾದ ಸಮಾಜದ ನಿರ್ಮಾಣ ಅವರ ಆಶಯವಾಗಿತ್ತು. ಸಾಮ್ರಾಜ್ಯಶಾಹಿಯು ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಹೊಸ ರೂಪಗಳಲ್ಲಿ ಪ್ರಭಾವ ಬೀರುತ್ತಿರುವ ಸಂದರ್ಭದಲ್ಲಿ   ಭಗತ್ ಸಿಂಗ್ ಅವರ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಸಮಾಜವಾದಿ ಚಿಂತನೆ ಹಾಗೂ ಸಮಾನತೆಯ ಸಮಾಜದ ಕುರಿತ ಅವರ ಆಶಯಗಳನ್ನು ಇಂದಿನ ವಿದ್ಯಾರ್ಥಿ-ಯುವಜನರಿಗೆ ಪರಿಚಯಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ  ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರಾಜ್ಯಮಟ್ಟದ ‘ನಾನೇಕೆ ನಾಸ್ತಿಕ’ ವೈಚಾರಿಕ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು,  ಈ ಬಾರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಭಗತ್ ಸಿಂಗ್ ಅವರ ಜನ್ಮದಿನವನ್ನು ಹಾಸನದಲ್ಲಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿವಿಧ ವಿಚಾರಗೋಷ್ಠಿ, ಸಂವಾದ ಮತ್ತು ಪುಸ್ತಕ ಬಿಡುಗಡೆ

ಸೆಪ್ಟೆಂಬರ್ 27ರಂದು ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ನಡೆಯಲಿರುವ ಸಮಾವೇಶವನ್ನು ಪ್ರೊ. ರಾಜಪ್ಪ ದಳವಾಯಿ   ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ನರೇಂದ್ರ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.  ಸಮಾವೇಶದಲ್ಲಿ ‘ಭಾರತದ ಮರೆಮಾಚಿದ ನಾಸ್ತಿಕತೆ ಇತಿಹಾಸ’ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಇದರ ಜೊತೆಗೆ ‘ನಾಸ್ತಿಕತೆ ಎಂದರೇನು?’, ‘ಭಾರತದಲ್ಲಿ ನಾಸ್ತಿಕತೆಯ ಇತಿಹಾಸ’ ಸೇರಿದಂತೆ ಹಲವು ವಿಷಯಗಳ ಕುರಿತು ವಿಚಾರಗೋಷ್ಠಿಗಳು ಹಾಗೂ ಸಂವಾದಗಳು ನಡೆಯಲಿವೆ. ದಿನವಿಡೀ ನಡೆಯುವ ಕಾರ್ಯಕ್ರಮವು ಸಾಂಪ್ರದಾಯಿಕ ಏಕಮುಖ ಭಾಷಣಕ್ಕಿಂತ ಸಂವಾದ ಮತ್ತು ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ವೈಜ್ಞಾನಿಕ ಚಿಂತನೆ, ಭಗತ್ ಸಿಂಗ್ ಅವರ ವಿಚಾರಗಳು, ನಾಸ್ತಿಕತೆ, ಮಾನವೀಯತೆ, ಸಮಾನತೆ ಹಾಗೂ ಸಮಕಾಲೀನ ಸಾಮಾಜಿಕ ಸಮಸ್ಯೆಗಳ ಕುರಿತು ಚಿಂತನ-ಮಂಥನ ನಡೆಯಲಿದೆ. ವೈದ್ಯರು, ಮನೋವೈದ್ಯರು ಹಾಗೂ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ವಿದ್ಯಾರ್ಥಿ-ಯುವಜನರ ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.

ಭಗತ್ ಸಿಂಗ್ ಅವರು ಜೈಲಿನಲ್ಲಿದ್ದ ಸಂದರ್ಭದಲ್ಲಿ ಬರೆದ ‘ನಾನೇಕೆ ನಾಸ್ತಿಕ’ (Why I Am an Atheist) ಎಂಬ ಲೇಖನವು ಅವರ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಯ ಪ್ರಮುಖ ದಾಖಲೆಯಾಗಿದೆ. 1930ರಲ್ಲಿ ರಚನೆಯಾದ ಈ ಲೇಖನ 1931ರಲ್ಲಿ ಪ್ರಕಟವಾಯಿತು. ಇಂದಿಗೂ ಆ ಲೇಖನ ವೈಚಾರಿಕ ಚಿಂತನೆಗೆ ಪ್ರೇರಣೆ ನೀಡುವ ಕೃತಿಯಾಗಿದ್ದು, ಅದನ್ನು ಆಧಾರವಾಗಿಟ್ಟುಕೊಂಡು ಸಮಾವೇಶದಲ್ಲಿ ಹಲವು ವಿಚಾರಗೋಷ್ಠಿ ಮತ್ತು ಸಂವಾದಗಳನ್ನು ಆಯೋಜಿಸಲಾಗಿದೆ.

  • ಧರ್ಮೇಶ್

ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆ
ವಿದ್ಯಾರ್ಥಿ-ಯುವಜನರಲ್ಲಿ ಭಗತ್ ಸಿಂಗ್ ಅವರ ವಿಚಾರಧಾರೆ ಹಾಗೂ ವೈಚಾರಿಕ ಚಿಂತನೆಗಳನ್ನು ಪರಿಚಯಿಸುವ ಉದ್ದೇಶದಿಂದ ಈಗಾಗಲೇ ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ನಡೆಸಲಾಗಿದೆ. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾವೇಶದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ತಿಳಿಸಲಾಯಿತು.

ಸಮಾವೇಶದಲ್ಲಿ ಭಾಗವಹಿಸಲು ಆನ್‌ಲೈನ್ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲಾ-ಕಾಲೇಜುಗಳಿಗೂ ನೋಂದಣಿ ಅರ್ಜಿಗಳನ್ನು ಕಳುಹಿಸಲಾಗಿದ್ದು, ವಿದ್ಯಾರ್ಥಿ-ಯುವಜನರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಆನ್‌ಲೈನ್ ನೋಂದಣಿ ಜೊತೆಗೆ ಮಾಡಲಾಗುತ್ತಿದ್ದು, ಅಂದು ಬೆಳಗ್ಗೆ ಅಂಬೇಡ್ಕರ್ ಭವನದಲ್ಲಿಯೂ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಳ್ಳಬಹುದು ಎಂದು ಧರ್ಮೇಶ್ ವಿವರಿಸಿದರು.

ನಾಸ್ತಿಕತೆ ಎಂದರೆ ಧರ್ಮವಿರೋಧವಲ್ಲ

“ನಾಸ್ತಿಕತೆ ಎಂದರೆ ದೇವರು ಅಥವಾ ಧರ್ಮವನ್ನು ವಿರೋಧಿಸುವುದು ಎಂಬ ತಪ್ಪು ಕಲ್ಪನೆ ಇದೆ. ನಾಸ್ತಿಕತೆ ಎಂದರೆ ವೈಚಾರಿಕವಾಗಿ ಮತ್ತು ಪ್ರಶ್ನಿಸುವ ಮನೋಭಾವದಿಂದ ಯೋಚಿಸುವುದು. ವೈಜ್ಞಾನಿಕ ಚಿಂತನೆ ಮತ್ತು ಪ್ರಗತಿಪರ ವಿಚಾರಧಾರೆ ಬೆಳೆಯದಿದ್ದರೆ ಸಮಾಜ ಹಳೆಯ ಕಂದಾಚಾರ ಮತ್ತು ಮೂಢನಂಬಿಕೆಗಳತ್ತ ಹಿಂದಿರುಗುವ ಅಪಾಯವಿದೆ. ಜಗತ್ತು ವೈಜ್ಞಾನಿಕವಾಗಿ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಭಾರತವೂ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಮುನ್ನಡೆಯಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಧರ್ಮೇಶ್ ಪ್ರತಿಕ್ರಿಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಎಂ.ಸಿ. ಡೋಂಗ್ರೆ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್, ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, ಡಿವೈಎಫ್‌ಐ ಜಿಲ್ಲಾ ಸಂಚಾಲಕ ಪೃಥ್ವಿ, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್ ಹಾಗೂ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.

You may also like

Leave a Comment