- ಹೊಯ್ಸಳ ಉತ್ಸವ ನಡೆಸಬೇಕು ಎಂಬ ಮನವಿಗೆ ಕಿವಿಕೊಡದ ಸರ್ಕಾರ
- ಹೊಯ್ಸಳ ಸಾಮ್ರಾಜ್ಯದ ಗತವೈಭವ ನೆನಪು ಮಾಡಲು ಸ್ಥಳೀಯರ ನಿರ್ಧಾರ
ಹಳೇಬೀಡು: ಹೊಯ್ಸಳ ಸಾಮ್ರಾಜ್ಯದ ಗತವೈಭವವನ್ನು ನೆನಪು ಮಾಡಿಕೊಳ್ಳಲು ಹೊಯ್ಸಳ ಉತ್ಸವ ನಡೆಸಬೇಕು ಎಂಬ ಮನವಿಗೆ ಸರ್ಕಾರ ಕಿವಿಕೊಡದ್ದರಿಂದ ಸ್ಥಳೀಯರೇ ಶಾಂತಲಾ ಉತ್ಸವ ನಡೆಸಲು ಸಿದ್ಧತೆ ನಡೆಸಿದ್ದಾರೆ.
ರಾಜ್ಯ ಸರ್ಕಾರ ಕಿತ್ತೂರು ಉತ್ಸವ, ಹಂಪಿ ಉತ್ಸವ ಮತ್ತಿತರ ಉತ್ಸವಗಳನ್ನು ನಡೆಸುತ್ತದೆ. ಆದರೆ ಶಿಲ್ಪಕಲಾ ಸಂಪತ್ತಿಗೆ ಅಪಾರ ಕೊಡುಗೆ ನೀಡಿರುವ ಹೊಯ್ಸಳರ ನೆನಪು ಮಾಡಿಕೊಳ್ಳಲು ಸರ್ಕಾರ ನಿರಾಸಕ್ತಿ ತೋರುತ್ತಿದೆ. ಜಿಲ್ಲಾಡಳಿತಕ್ಕೂ ಈ ಬಗ್ಗೆ ಆಸಕ್ತಿ ಇಲ್ಲ. ವರ್ಷಕ್ಕೊಮ್ಮೆ ಹಾಸನಾಂಬೆ ಜಾತ್ರೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ತೋರುವ ಆಸಕ್ತಿ ಹೊಯ್ಸಳ ಉತ್ಸವ ನಡೆಸಲು ಇರುವುದಿಲ್ಲ. ಹಾಗಾಗಿ ಸ್ಥಳೀಯರೇ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹೊಯ್ಸಳರ ನೆನಪು ಮಾಡಿಕೊಡಲು ಸಿದ್ಧತೆ ನಡೆಸುತ್ತಿದ್ದಾರೆ.
ಹೊಯ್ಸಳೇಶ್ವರ ಪ್ರವಾಸೋದ್ಯಮ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸ್ಥಳೀಯ ರೈತ ಸಂಘ, ಕನ್ನಡ ಸಾಹಿತ್ಯ ಪರಿಷತ್, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಹಾಗೂ ಮಹೋತ್ಸವ ಸಮಿತಿ ಆಶ್ರಯದಲ್ಲಿ ಶಾಂತಲಾ ಮಹೋತ್ಸವ ನಡೆಸಲು ಸಿದ್ದತೆ ನಡೆಯುತ್ತಿದೆ.
2014ರ ಡಿಸೆಂಬರ್ನಲ್ಲಿ ಹಳೇಬೀಡಿನಲ್ಲಿ ಹೊಯ್ಸಳ ಉತ್ಸವ ನಡೆಸಲಿಲ್ಲ ಎಂದು ಜನರು ಬೇಸರಗೊಂಡಿದ್ದರು. 2015ರ ಫೆಬ್ರುವರಿಯಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಸ್ಥಳೀಯ ಸಮಿತಿಯಿಂದ ಶಾಂತಲಾ ಸಂಗೀತ, ನೃತ್ಯೋತ್ಸವ ನಡೆಸಲು ಅವಕಾಶ ದೊರಕಿತ್ತು. ಈಗ ಸರ್ಕಾರ ಹೊಯ್ಸಳ ಉತ್ಸವ ನಡೆಸಲು ಹಿಂದೇಟು ಹಾಕಿದ್ದರಿಂದ ಶಾಂತಲಾ ಮಹೋತ್ಸವ ಹೆಸರಿನಿಂದ ಉತ್ಸವ ನಡೆಸಲು ಸ್ಥಳೀಯರು ಮುಂದಾಗಿದ್ದಾರೆ.
ನಿರ್ದಿಷ್ಟ ಉತ್ಸವ ನಡೆಯಲಿ
ಪ್ರತಿವರ್ಷ ದಸರಾ ಬಂದರೆ ಮೈಸೂರು ಮೈಕೊಡವಿ ಮೇಲೇಳುತ್ತದೆ. ಸ್ಥಳೀಯರು ಮಾತ್ರವಲ್ಲದೇ ವಿದೇಶಿ ಪ್ರವಾಸಿಗರು ಮೈಸೂರಿನತ್ತ ಹೆಜ್ಜೆ ಹಾಕುತ್ತಾರೆ. ವ್ಯಾಪಾರ ವ್ಯವಹಾರ ಗರಿಗೆದರುತ್ತವೆ. ಆಗಿನ ದೋರಸಮುದ್ರ (ದ್ವಾರಸಮುದ್ರ) ಇಂದಿನ ಹಳೇಬೀಡು ಹೆಚ್ಚು ವರ್ಷ ಹೊಯ್ಸಳರ ರಾಜಧಾನಿಯಾಗಿತ್ತು. ಹಳೇಬೀಡು ಹಾಗೂ ಸುತ್ತ ಲೆಕ್ಕವಿಲ್ಲದಷ್ಟು ಹೊಯ್ಸಳರ ಸ್ಮಾರಕಗಳಿವೆ. ಸರ್ಕಾರ ಹಳೇಬೀಡಿನಲ್ಲಿಯೂ ಒಂದು ನಿರ್ಷಿಷ್ಟ ಉತ್ಸವ ನಡೆಸಬೇಕು ಎನ್ನುತ್ತಾರೆ ಪ್ರವಾಸೋದ್ಯಮ ಆಸಕ್ತರು.
ಡಿ.22 ರಿಂದ 23 ವರೆಗೆ ಎರಡು ದಿನ ಹಳೇಬೀಡಿನಲ್ಲಿ ವೈಭವದ ಉತ್ಸವ ನಡೆಯಲಿದೆ. 22 ರಂದು ಸಂಜೆ 4 ಗಂಟೆಗೆ ಅಂಬೇಡ್ಕರ್ ವೃತ್ತದಿಂದ ಕೆಪಿಎಸ್ ಶಾಲೆ ಆವರಣದವರೆಗೂ ಜನಪದ ಕಲಾ ತಂಡಗಳ ಮೆರವಣಿಗೆ ನಡೆಯುತ್ತದೆ. ಹೊಯ್ಸಳೇಶ್ವರ ದೇವಾಲಯದ ಪ್ರವೇಶ ದ್ವಾರದ ಬಳಿ ಇರುವ ಕೆಪಿಎಸ್ ಶಾಲೆ ಆವರಣದಲ್ಲಿ ನಿರ್ಮಿಸಲಿರುವ ಬೃಹತ್ ವೇದಿಕೆಯಲ್ಲಿ ಸಂಜೆ 6 ಗಂಟೆಯಿಂದ ವಿವಿಧ ಶಾಲಾ– ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮಿಮಿಕ್ರಿ ಗೋಪಿ ಹಾಸ್ಯದ ಹೊನಲು ಹರಿಸಲಿದ್ದಾರೆ. ಕೃಷಿ ಮೇಳವನ್ನೂ ಆಯೋಜಿಸಲಾಗಿದೆ. ಡಿ. 23ರಂದು ಸಂಜೆ 4ಗಂಟೆಯಿಂದ 6ರವರೆಗೆ ರೈತ ದಿನಾಚರಣೆ ನಡೆಯುತ್ತದೆ. ನಂತರ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.
ಸರ್ಕಾರ ಹೊಯ್ಸಳ ಉತ್ಸವ ಮರೆತಿರುವುದರಿಂದ ಶಾಂತಲಾ ಮಹೋತ್ಸವ ನಡೆಸುತ್ತಿದ್ದೇವೆ. 2014ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಆಶ್ರಯದಲ್ಲಿ ಶಾಂತಲಾ ಸಂಗೀತ ನೃತ್ಯೋತ್ಸವ ನಡೆಸಿದ್ದೆವು.
– ಕೆ.ಎಸ್.ಲಿಂಗೇಶ್, ಉತ್ಸವ ಸಮಿತಿ, ಅಧ್ಯಕ್ಷ


ಸರ್ಕಾರ ಹೊಯ್ಸಳ ಉತ್ಸವ ಮರೆತಿರುವುದರಿಂದ ಶಾಂತಲಾ ಮಹೋತ್ಸವ ನಡೆಸುತ್ತಿದ್ದೇವೆ. 2014ರಲ್ಲಿ