-ಚುನಾಯಿತರ ಅಧಿಕಾರಾವಧಿ ವಿವಾದ ಹೈಕೋರ್ಟ್ ನಲ್ಲಿ ವಿಚಾರಣೆ
ಹಾಸನ: ಹಾಸನ ಮಹಾನಗರ ಪಾಲಿಕೆಯ ಚುನಾಯಿತ ಆಡಳಿತ ಮಂಡಳಿ ಅವಧಿ ಮುಕ್ತಾಯ ಆಗಿದ್ದು, ಸರ್ಕಾರ ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅವರನ್ನು ಹಾಸನ ಮಹಾನಗರ ಪಾಲಿಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ.
ಪಾಲಿಕೆಯ ಚುನಾಯಿತ ಆಡಳಿತ ಮಂಡಳಿ ಅವಧಿ 2025 ಅ.28 ರಂದು ಕೊನೆಗೊಂಡಿದೆ. ಹೊಸ ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವವರೆಗೂ ಪಾಲಿಕೆ ಕಾರ್ಯ ನಿರ್ವಹಣೆಗಾಗಿ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.
ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿ ನಿಯಮ 1976ರ ನಿಯಮ-509 ರನ್ವಯ ಪ್ರದತ್ತವಾಗಿರುವ ಅಧಿ ಕಾರ ದನ್ವಯ ಆಡಳಿತಾತ್ಮಕ ಹಿತದೃಷ್ಟಿಯಿಂದ ಅ.29 ರಿಂದಲೇ ಅನ್ವಯ ಆಗುವಂತೆ ಮುಂದಿನ ಆದೇಶದವರೆಗೆ ನಿತೇಶ್ ಪಾಟೀಲ್ ಪಾಲಿಕೆ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ತಿಳಿಸಿದ್ದಾರೆ.,
ಇಂದು ವಿಚಾರಣೆ:
ಚುನಾಯಿತ ಆಡಳಿತ ಮಂಡಳಿಯ ಅಧಿಕಾರಾವಧಿ ಸಂಬಂಧ ಚುನಾಯಿತ ಪ್ರತಿನಿಧಿಗಳು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ಮಂಗಳವಾರ ನಡೆಯಲಿದೆ.
ಒಂದು ವೇಳೆ ಚುನಾಯಿತ ಸದಸ್ಯರ ಮನವಿಯನ್ನು ಹೈಕೋರ್ಟ್ ಮಾನ್ಯ ಮಾಡಿ ಸರ್ಕಾರಕ್ಕೆ ಸೂಚನೆ ನೀಡಿದರೆ ಮುಂದಿನ 2026 ಏಪ್ರಿಲ್ 22 ರ ವರೆಗೂ ಇದೇ ಮಂಡಳಿ ಮುಂದುವರಿಯ ಬಹುದಾಗಿದೆ.
ಈ ಹಿಂದಿನ ಚುನಾವಣೆಷನಡೆದಾಗ ಚುನಾವಣಾಧಿಕಾರಿ ಆಗಿದ್ದ, ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು 35 ಮಂದಿ ಕೌನ್ಸಿಲರ್ಗೆ ವಿತರಣೆ ಮಾಡಿರುವ ಪ್ರಮಾಣಪತ್ರದ ಅವಧಿ 2026 ಏ.22 ರ ವರೆಗೆ ಇದೆ ಎಂಬುದು ಸದಸ್ಯರ ವಾದವಾಗಿದೆ. ಹೀಗಾಗಿ ಹೈಕೋಟ್೯ ತೀರ್ಪಿನ ನಂತರ ಎಲ್ಲವೂ ನಿರ್ಧಾರ ಆಗಲಿದೆ.

