Home ರಾಜ್ಯ 36 ಸಾವಿರ ಕನಿಷ್ಠ ವೇತನಕ್ಕೆ ಆಗ್ರಹ

36 ಸಾವಿರ ಕನಿಷ್ಠ ವೇತನಕ್ಕೆ ಆಗ್ರಹ

by Editor

– ಗುತ್ತಿಗೆ ಪದ್ಧತಿ ವಿರುದ್ಧ ಹೋರಾಟ: ಸಿಐಟಿಯು ಸಮ್ಮೇಳನದಲ್ಲಿ ನಿರ್ಣಯ

ಹಾಸನ: ನಗರದಲ್ಲಿ ನಡೆಯುತ್ತಿರುವ 16ನೇ ಸಿಐಟಿಯು ರಾಜ್ಯ ಸಮ್ಮೇಳನ, ರಾಜ್ಯದ ಲಕ್ಷಾಂತರ ಕಾರ್ಮಿಕರ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಬಲ್ಲ 2 ನಿರ್ಣಾಯಕ ನಿರ್ಣಯ ಅಂಗೀಕರಿಸಿದೆ. ಮಾಸಿಕ ಕನಿಷ್ಠ ವೇತನವನ್ನು 36 ಸಾವಿರಕ್ಕೆ ಪರಿಷ್ಕರಿಸಬೇಕು ಮತ್ತು ಗುತ್ತಿಗೆ-ಹೊರಗುತ್ತಿಗೆ ಪದ್ಧತಿಯಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ ಎಂದು ಸಿಐಟಿಯುವ ರಾಜ್ಯಾಧ್ಯಕ್ಷ ವರಲಕ್ಷ್ಮಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಈ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಫಲವಾದರೆ, ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.

ನಾಳೆ ಬೃಹತ್ ರ‍್ಯಾಲಿ
ಸಮ್ಮೇಳನದ ಅಂತಿಮ ದಿನವಾದ ನಾಳೆ ಮಧ್ಯಾಹ್ನ 12 ಗಂಟೆಗೆ ಹೇಮಾವತಿ ಪ್ರತಿಮೆಯಿಂದ ಬೃಹತ್ ಕಾರ್ಮಿಕರ ರ‍್ಯಾಲಿ ಆರಂಭವಾಗಲಿದೆ. ಕೆಂಪು ಸಮವಸ್ತ್ರ ಧರಿಸಿದ ಕಾರ್ಮಿಕರು ಮತ್ತು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಈ ಮೆರವಣಿಗೆ ಶಿಸ್ತುಬದ್ಧವಾಗಿ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ ಬಹಿರಂಗ ಸಮಾವೇಶದೊಂದಿಗೆ ಮುಕ್ತಾಯಗೊಳ್ಳಲಿದೆ.
– ಧರ್ಮೇಶ್, ಸಿಐಟಿಯು ಜಿಲ್ಲಾಧ್ಯಕ್ಷ

ಕರ್ನಾಟಕದ ಸುಮಾರು 1.5  ಕೋಟಿ ಕಾರ್ಮಿಕರು ಎದುರಿಸುತ್ತಿರುವ ದೀರ್ಘಕಾಲೀನ ಆರ್ಥಿಕ ಸಂಕಷ್ಟ ಮತ್ತು ಉದ್ಯೋಗ ಅಭದ್ರತೆಯ ಬಿಕ್ಕಟ್ಟುಗಳನ್ನು ಪರಿಹರಿಸುವ ಗುರಿ ನಮ್ಮದು.
ಮೊದಲಿಗೆ ಕನಿಷ್ಠ ವೇತನ ಪರಿಷ್ಕರಣೆ ಆಗಲೇಬೇಕು. ಏಕೆಂದರ ಎಕಳೆದ 7 ವರ್ಷಗಳಿಂದ ವೇತನ ಪರಿಷ್ಕರಣೆಯಾಗದೆ ಸುಮಾರು 1.5 ಕೋಟಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದರು.
ಗುತ್ತಿಗೆ ಕಾರ್ಮಿಕರ ಕಾಯಂ: ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿನ ಶೇ.50.60 ರಷ್ಟು ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರನ್ನು ಶೋಷಣೆಯಿಂದ ಮುಕ್ತಗೊಳಿಸಿ, ವಿಶೇಷ ಕಾನೂನಿನ ಮೂಲಕ ಕಾಯಂಗೊಳಿಸಬೇಕು.
ಸರ್ಕಾರ ತನ್ನ ಕರಡು ಅಧಿಸೂಚನೆಯಲ್ಲಿ ಕೌಶಲ್ಯ ಮತ್ತು ವಲಯಗಳ ಆಧಾರದ ಮೇಲೆ 23000 -30000 ದವರೆಗೆ ವೇತನ ಪ್ರಸ್ತಾಪಿಸಿದೆ. ಆದರೆ ಸಿಐಟಿಯು ಇದನ್ನು ತಿರಸ್ಕರಿಸಿದ್ದು, 36000 ವೇತನ ನ್ಯಾಯಸಮ್ಮತ ಎಂದು ಪ್ರತಿಪಾದಿಸಿದೆ.
ಪ್ಲಾಂಟೇಶನ್ ಕಾರ್ಮಿಕರಿಗೆ ದಿನಕ್ಕೆ ಕೇವಲ 461 , ಬೀಡಿ ಕಾರ್ಮಿಕರಿಗೆ ದಿನಕ್ಕೆ 350 ರೂ. ಕೂಲಿ ದಾಟಿಲ್ಲ. ಇದು ಸರಿಯಾಗಬೇಕೆಂದರು.
ಖಾಸಗಿ ಉತ್ಪಾದನಾ ವಲಯದಲ್ಲಿ ಶೇ.50ಕ್ಕಿಂತ ಹೆಚ್ಚು ಮತ್ತು ಸರ್ಕಾರಿ ಸೇವೆಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಕಾರ್ಮಿಕರು ಅಸುರಕ್ಷಿತ ಉದ್ಯೋಗಗಳಲ್ಲೇ ದುಡಿಯುತ್ತಿದ್ದಾರೆ. ಪ್ರತಿ ವರ್ಷ ಗುತ್ತಿಗೆ ನವೀಕರಣವಾಗುವುದೋ, ಇಲ್ಲವೋ ಎಂಬ ಭಯ, ಶಾಸನಾತ್ಮಕ ಸೌಲಭ್ಯಗಳ ನಿರಾಕರಣೆ ಮತ್ತು ಹಕ್ಕುಗಳ ದಮನವನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ. ಸಹಕಾರಿ ಸಂಘಗಳ ಸ್ಥಾಪನೆ ಕಾಯಂ ಉದ್ಯೋಗಕ್ಕೆ ಪರ್ಯಾಯವಲ್ಲ ಮತ್ತು ಇದರಿಂದ ಉದ್ಯೋಗ ಭದ್ರತೆ ಅಥವಾ ಶಾಸನಾತ್ಮಕ ಸೌಲಭ್ಯ ಖಾತ್ರಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್.ಉಮೇಶ್, ಸಮ್ಮೇಳನ ನಿರ್ಣಯ ಸಮಿತಿ ಸಂಚಾಲಕಿ ಯಮುನಾ ಗಾಂವ್ಕರ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಂಬಿ.ಪುಷ್ಪ ಹಾಜರಿದ್ದರು.

You may also like

Leave a Comment