Home ಅಪರಾಧ ಜಮೀನು ವೈಮನಸ್ಯ: ಅಣ್ಣನ ಕೈಯಲ್ಲಿ ತಮ್ಮನ ಹತ್ಯೆ

ಜಮೀನು ವೈಮನಸ್ಯ: ಅಣ್ಣನ ಕೈಯಲ್ಲಿ ತಮ್ಮನ ಹತ್ಯೆ

by Editor

 

ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿ ಸೊಂಪೂರ ಗ್ರಾಮದಲ್ಲಿ, ಕುಟುಂಬದ ಜಮೀನು ಹಕ್ಕಿನ ವಿಚಾರವಾಗಿ ಉದ್ಭವಿಸಿದ ವೈಮನಸ್ಯವು ಗಂಭೀರ ರೂಪ ಪಡೆದು, ತಮ್ಮನಾದ ದಯಾಕಾರ್ (48) ಅವರ ದಾರುಣ ಸಾವಿಗೆ ಕಾರಣವಾದ ಘಟನೆ ನಡೆದಿದೆ.

ಕುಟುಂಬಕ್ಕೆ ಸೇರಿದ ಸುಮಾರು 20 ಎಕರೆ ಜಮೀನಿನ ಪಾಲು–ಹಕ್ಕು ಸಂಬಂಧಿಸಿದ ವಿಚಾರ ಕಳೆದ ನಾಲ್ಕು ವರ್ಷಗಳಿಂದ ಅರಕಲಗೂಡು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಪ್ರಕರಣ ನಡಿದಾಡುತ್ತಿದ್ದ ನಡುವೆಯೇ ವಿವಾದಿತ ಭೂಮಿಯಲ್ಲಿ ಸಿಲ್ವರ್ ಮರ ಕಡಿತ ಕಾರ್ಯ ನಡೆಯುತ್ತಿರುವುದು ಹೊಸ ಗಲಾಟೆಗೆ ಕಾರಣ ಎಂದು ತಿಳಿದುಬಂದಿದೆ.

ಘಟನೆ ವಿವರ:
ಮರ ಕಡಿತದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ದಯಾಕಾರ್,
“ಪ್ರಕರಣ ನ್ಯಾಯಾಲಯದಲ್ಲಿರುವಾಗ ಮರವನ್ನು ಏಕೆ ಕಡಿಸುತ್ತಿದ್ದೀಯ?” ಎಂದು ತಮ್ಮ ಅಣ್ಣ ರಾಜಶೇಖರ್ (55) ಅವರನ್ನು ಪ್ರಶ್ನಿಸಿದ ಸಂದರ್ಭದಲ್ಲಿ, ವಾಗ್ವಾದ ತೀವ್ರಗೊಂಡು, ರಾಜಶೇಖರ್ ಅವರು ಕೈಯಲ್ಲಿದ್ದ ಮಚ್ಚು ಮತ್ತು ಲಾಂಗುಗಳಿಂದ ತಮ್ಮನ ಮೇಲೆ ದಾಳಿ ನಡೆಸಿದ್ದಾರೆ.

ಕುತ್ತಿಗೆ ಭಾಗಕ್ಕೆ ಬಿದ್ದ ಗಂಭೀರ ಗಾಯದಿಂದ ದಯಾಕಾರ್ ಸ್ಥಳದಲ್ಲಿಯೇ ಮೃತರಾಗಿದ್ದಾರೆ.
ಘಟನೆಯ ಸಮಯದಲ್ಲಿ ಇದ್ದ ಇನ್ನೊಬ್ಬ ತಮ್ಮ ಸೋಮಶೇಖರ್ ಮೇಲೆ ದಾಳಿ ನಡೆಸಲಾಗಿದ್ದು, ಅವರ ಕೈ ಮತ್ತು ಕುತ್ತಿಗೆ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ.

ಪೊಲೀಸ್ ಕ್ರಮ:
ಘಟನೆಯ ನಂತರ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದು,
ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಬಂಧನಕ್ಕೆ ಪೊಲೀಸರು ಶೋಧ ಕಾರ್ಯವನ್ನು ಕೈಗೊಂಡಿದ್ದಾರೆ.

You may also like

Leave a Comment