Home ತಾಲೂಕುಅರಕಲಗೂಡು ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಕ್ರಮ

ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಕ್ರಮ

ಮಲ್ಲಿಪಟ್ಟಣ ಲಕ್ಷ್ಮಣ ಕ್ಲಿನಿಕ್, ಅರಕಲಗೂಡು ಜಯಲಕ್ಷ್ಮಿ ಕ್ಲಿನಿಕ್ ಗೆ ಬೀಗ

by Editor

ಅರಕಲಗೂಡು: ಅರ್ಹತೆ ಇಲ್ಲದೆ ನಕಲಿ ವೈದ್ಯಕೀಯ ಸೇವೆ ಮತ್ತು ಔಷಧ ವಿತರಣೆ ಮಾಡುತ್ತಿದ್ದ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಸಮರ ಸಾರಿದೆ. ಸರ್ಕಾರದ ಕಟ್ಟುನಿಟ್ಟಿನ ನಿರ್ದೇಶನದಂತೆ ಕಾರ್ಯಾಚರಣೆಗಿಳಿದ ತಾಲೂಕು ಆರೋಗ್ಯಾಧಿಕಾರಿಗಳ ತಂಡ, ಮಲ್ಲಿಪಟ್ಟಣ ಹಾಗೂ ಅರಕಲಗೂಡು ಪಟ್ಟಣದ ಎರಡು ಕ್ಲಿನಿಕ್‌ಗಳ ಮೇಲೆ ಶನಿವಾರ ದಿಢೀರ್ ದಾಳಿ ನಡೆಸಿ ಬೀಗಮುದ್ರೆ ಹಾಕಿದೆ.
​​ಮಲ್ಲಿಪಟ್ಟಣದಲ್ಲಿ ಡಾ. ವಿಶ್ವನಾಥ್ ಎಂಬುವವರು ಕಳೆದ ಹಲವು ವರ್ಷಗಳಿಂದ ‘ಲಕ್ಷ್ಮಣ್ ಕ್ಲಿನಿಕ್’ ಹೆಸರಿನಲ್ಲಿ ಅನಧಿಕೃತವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದರು. ಯಾವುದೇ ಅಧಿಕೃತ ಪದವಿ ಇಲ್ಲದಿದ್ದರೂ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ವಂಚಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು. ಅರಕಲಗೂಡು ಪಟ್ಟಣದ ‘ಜಯಲಕ್ಷ್ಮಿ ಕ್ಲಿನಿಕ್’ ಮೇಲೂ ದಾಳಿ ನಡೆಸಲಾಗಿದ್ದು, ಅಲ್ಲಿಯೂ ನಿಯಮಬಾಹಿರ ಚಟುವಟಿಕೆಗಳು ಕಂಡುಬಂದ ಹಿನ್ನೆಲೆಯಲ್ಲಿ ಕ್ಲಿನಿಕ್ ಅನ್ನು ಸೀಜ್ ಮಾಡಲಾಗಿದೆ.
​​ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಕ್ಲಿನಿಕ್‌ಗಳ ದಾಖಲೆಗಳನ್ನು ಪರಿಶೀಲಿಸಿದಾಗ ಅವುಗಳು ಅನಧಿಕೃತ ಎಂದು ದೃಢಪಟ್ಟಿದೆ.
​”ನಕಲಿ ವೈದ್ಯರಿಂದ ರೋಗಿಗಳ ಪ್ರಾಣಕ್ಕೆ ಅಪಾಯವಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ಡಾ. ಪುಷ್ಪಲತಾ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರವು ಆಗೊಮ್ಮೆ ಈಗೊಮ್ಮೆ ಇಂತಹ ದಾಳಿಗಳನ್ನು ನಡೆಸುತ್ತದೆಯಾದರೂ, ಗ್ರಾಮೀಣ ಭಾಗಗಳಲ್ಲಿ ಬೇರೂರಿರುವ ನಕಲಿ ವೈದ್ಯರ ಜಾಲಕ್ಕೆ ಸಂಪೂರ್ಣ ಕಡಿವಾಣ ಬೀಳುತ್ತದೆಯೇ? ಈ ಕ್ರಮಗಳು ಕೇವಲ ತಾತ್ಕಾಲಿಕವೇ ಅಥವಾ ಶಾಶ್ವತ ಪರಿಹಾರ ನೀಡುತ್ತವೆಯೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

 

You may also like

Leave a Comment