Home ತಾಲೂಕುಅರಕಲಗೂಡು ತಂಬಾಕಿಗೆ ನ್ಯಾಯಯುತ ಬೆಲೆಗಾಗಿ ರೈತರ ಅಹೋರಾತ್ರಿ ಧರಣಿ

ತಂಬಾಕಿಗೆ ನ್ಯಾಯಯುತ ಬೆಲೆಗಾಗಿ ರೈತರ ಅಹೋರಾತ್ರಿ ಧರಣಿ

ಆಂಧ್ರಪ್ರದೇಶದ ಬೆಲೆ ಇಲ್ಲಿಯೂ ಕೊಡಿ ಇಲ್ಲದಿದ್ದರೆ ಮುಕ್ತ ಮಾರುಕಟ್ಟೆಗೆ ಅವಕಾಶ ಕೊಡಿ

by Editor

ರಾಮನಾಥಪುರ: ತಂಬಾಕು ಬೆಳೆಗೆ ನ್ಯಾಯಯುತ ಬೆಂಬಲ ಬೆಲೆ ನೀಡಬೇಕು ಹಾಗೂ ಮುಕ್ತ ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿರುವ ತಂಬಾಕು ಮಂಡಳಿ ಕಚೇರಿ ಮುಂದೆ ರೈತರು ಹಮ್ಮಿಕೊಂಡಿರುವ ಅಹೋರಾತ್ರಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
​ಕಳೆದ ಒಂದು ದಿನದಿಂದ ಮಂಡಳಿಯ ಕಚೇರಿ ಮುಂದೆ ಬೀಡು ಬಿಟ್ಟಿರುವ ನೂರಾರು ಬೆಳೆಗಾರರು, ರಾತ್ರಿಯಿಡೀ ಮಂಡಳಿಯ ಆವರಣದಲ್ಲೇ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘಟನೆಗಳ ಬೆಂಬಲದೊಂದಿಗೆ ನಡೆಯುತ್ತಿರುವ ಈ ಹೋರಾಟದಲ್ಲಿ, ಅಧಿಕಾರಿಗಳ ಮೊಂಡುತನದ ವಿರುದ್ಧ ರೈತರು ತೀವ್ರ ವಾಗ್ದಾಳಿ ನಡೆಸಿದರು. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ತಂಬಾಕು ಮಂಡಳಿ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

​ತಾರತಮ್ಯದ ಆರೋಪ: ಆಂಧ್ರದಲ್ಲಿ ದರ ಹೆಚ್ಚು, ಇಲ್ಲಿ ಏಕೆ ಕಡಿಮೆ?

​ಪ್ರತಿಭಟನಾ ನಿರತ ರೈತರು ಮಂಡಳಿಯ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದಾರೆ. “ಆಂಧ್ರಪ್ರದೇಶದಲ್ಲಿ ತಂಬಾಕಿಗೆ ಅತಿ ಹೆಚ್ಚು ದರ ನೀಡಲಾಗುತ್ತದೆ. ಆದರೆ, ಅದೇ ಗುಣಮಟ್ಟದ ತಂಬಾಕನ್ನು ಇಲ್ಲಿ ಮಾರಾಟ ಮಾಡಲು ಹೋದರೆ ಅವಕಾಶ ನೀಡುತ್ತಿಲ್ಲ. ಇಲ್ಲಿನ ಮಾರುಕಟ್ಟೆಯಲ್ಲಿ ನಮಗೆ ಅನ್ಯಾಯವಾಗುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

​’ಜೈಲಿಗಾದರೂ ಹೋಗಲು ಸಿದ್ಧ’: ರೈತರ ಎಚ್ಚರಿಕೆ
​ಅಧಿಕಾರಿಗಳ ಬೆದರಿಕೆಗೆ ಮಣಿಯದ ರೈತರು, “ನಮ್ಮ ಮೇಲೆ ಕೇಸ್ ಹಾಕುವುದಾದರೆ ಹಾಕಿಕೊಳ್ಳಿ. ಇಲ್ಲಿ ಹಸಿವಿನಿಂದ ಕೂತು ಏನು ಮಾಡುವುದು? ಜೈಲಿಗಾದರೂ ಹೋಗಿ ಅಲ್ಲಿ ಸರ್ಕಾರ ನೀಡುವ ಊಟ ಮಾಡಿಕೊಂಡು ಬರುತ್ತೇವೆ,” ಎಂದು ಆಕ್ರೋಶದ ನುಡಿಗಳನ್ನಾಡಿದರು.
​”ಶಾಸಕರು ಮತ್ತು ಸಂಸದರು ತಕ್ಷಣವೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಒಂದು ವೇಳೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ,” ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
​ ತಂಬಾಕು ಮಂಡಳಿ ಕಚೇರಿ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಅಧಿಕಾರಿಗಳು ಬೆಲೆ ನಿಗದಿ ಪಡಿಸುವವರೆಗೂ ಸ್ಥಳದಿಂದ ಕದಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

 

You may also like

Leave a Comment