ಹಾಸನ: ಯುಪಿಎಸ್ಸಿ 2025ರ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿರುವ ಜಿಲ್ಲೆಯ ಸಕಲೇಶಪುರ ತಾಲೂಕಿನ ಗುರ್ಜೆನಹಳ್ಳಿ ಗ್ರಾಮದ ಮನೋಜ್ ಜಿ.ಎಸ್. ಅವರು 389ನೇ ರ್ಯಾಂಕ್ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.
ಮನೋಜ್ ಅವರ ತಂದೆ ಸೋಮಶೇಖರ್ ಕೃಷಿಕರಾಗಿದ್ದು, ತಾಯಿ ಕೆಲವು ವರ್ಷಗಳ ಹಿಂದೆ ಅಗಲಿದ್ದರು. ಮನೋಜ್ ಒಂದರಿಂದ ಮೂರನೇ ತರಗತಿವರೆಗೂ ಅರಕಲಗೂಡಿನ ಮಲ್ಲಿಪಟ್ಟಣದ ಮಲ್ನಾಡ ಶಾಲೆಯಲ್ಲಿ ಓದಿದ್ದರು. ಬಳಿಕ 4ರಿಂದ 5ನೇ ತರಗತಿವರೆಗೆ ಪಟ್ಟಣದ ಸಂತ ಜೋಸೆಫ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ, 6ನೇ ತರಗತಿಯಿಂದ ಪಿಯುಸಿವರೆಗೆ ಮಾವಿನಕೆರೆಯ ನವೋದಯ ಕೇಂದ್ರೀಯ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ತದನಂತರ ಇಂಜಿನಿಯರಿಂಗ್ ಪದವಿ ಮುಗಿಸಿ, ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು.
ತರಬೇತಿ ಪಡೆಯದೇ ಸಾಧನೆ: ವಿಶೇಷವೆಂದರೆ, ಮನೋಜ್ ಯುಪಿಎಸ್ಸಿ ಪರೀಕ್ಷೆಗೆ ಎಲ್ಲೂ ತರಬೇತಿ ಪಡೆದಿಲ್ಲ. ಸ್ವತಃ ಮನೆಯಲ್ಲೇ ಸಂಬಂಧಿತ ಪುಸ್ತಕಗಳನ್ನು ಓದುತ್ತ ಹಾಗೂ ಅಂತರ್ಜಾಲದಲ್ಲಿ ಬರುವ ಉಚಿತ ತರಬೇತಿ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವ ಮೂಲಕ ಪರೀಕ್ಷೆ ಎದುರಿಸಿ ಯಶ ಕಂಡಿದ್ದಾರೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಐಪಿಎಸ್ ಆಯ್ಕೆ ಮಾಡಿಕೊಂಡ ಮನೋಜ್, ತಾವು ಬರೆದ ಪರೀಕ್ಷೆಯಲ್ಲಿ 389ನೇ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

