ಬೆಂಗಳೂರು: ಭಾರತೀಯ ಚುನಾವಣಾ ಆಯೋಗವು (ಇಸಿಐ) ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಗ್ಯಾರಂಟಿ ಯೋಜನೆಗಳಡಿ ಬಿಡುಗಡೆಯಾದ ನಿಧಿಗಳ ವಿವರಗಳನ್ನು ಕೇಳಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಆಯೋಗವು ಪಕ್ಷಪಾತ, ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿರುವ ಸಿದ್ದರಾಮಯ್ಯ, ಈ ವಿಚಾರವಾಗಿ ಚುನಾವಣಾ ಆಯೋಗದ ನೀತಿಯು ಅನುಮಾನಸ್ಪದವಾಗಿದೆ ಎಂದಿದ್ದಾರೆ.
ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಸಂದರ್ಭದಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು, ರಾಜ್ಯದ ಗ್ಯಾರಂಟಿ ಯೋಜನೆಗಳಡಿ ಬಿಡುಗಡೆಯಾದ ನಿಧಿಗಳ ವಿವರಗಳನ್ನು ಕೇಳಿದೆ ಎಂದು ತಿಳಿಸಿದ್ದಾರೆ.
ನಮ್ಮ ಗ್ಯಾರಂಟಿ ಯೋಜನೆಗಳು ಈ ಉಪಚುನಾವಣೆ ಸಮಯದಲ್ಲಿ ಜಾರಿಯಾದವುಗಳಲ್ಲ ಎಂಬುದನ್ನು ಆರಂಭದಲ್ಲೇ ಸ್ಪಷ್ಟಪಡಿಸುತ್ತಿದ್ದೇನೆ. ಇವು 2023ರ ವಿಧಾನಸಭೆ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಗಳ ಭಾಗವಾಗಿ ನಮ್ಮ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಕಾರ್ಯಕ್ರಮಗಳಾಗಿವೆ. ಈ ಯೋಜನೆಗಳಡಿ ರಾಜ್ಯದ ಎಲ್ಲ ಫಲಾನುಭವಿಗಳ ಖಾತೆಗಳಿಗೆ ನಿಯಮಿತವಾಗಿ, ಪಾರದರ್ಶಕವಾಗಿ ಹಣ ವರ್ಗಾವಣೆಯಾಗುತ್ತಿದೆ. ರಾಜ್ಯದ ಎಲ್ಲ ವರ್ಗದ ಜನರು ಘನತೆಯಿಂದ ಜೀವಿಸಲು ಮತ್ತು ಜೀವನ ನಿರ್ವಹಣೆಗೆ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರವು ನೇರವಾಗಿ ಒದಗಿಸುತ್ತಿರುವ ಅನುದಾನವಾಗಿದೆ. ಈ ಯೋಜನೆಗಳು ಆಡಳಿತದ ಭಾಗವೇ ಹೊರತು, ಮತದಾರರನ್ನು ಸೆಳೆಯುವ ಕಾರ್ಯಕ್ರಮಗಳಲ್ಲ ಎಂದಿದ್ದಾರೆ.
ಆದರೆ ಈ ವಿಚಾರವಾಗಿ ಚುನಾವಣಾ ಆಯೋಗ ಅನುಸರಿಸುತ್ತಿರುವ ನೀತಿಯು ಅನುಮಾನಸ್ಪದವಾಗಿದೆ. ಮಹಾರಾಷ್ಟ್ರ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಚುನಾವಣೆಗೂ ಮುನ್ನ ನಗದು ವರ್ಗಾವಣೆ ಯೋಜನೆಗಳನ್ನು ಪ್ರಕಟಿಸಲಾಗಿದೆ ಮತ್ತು ಅಂತಹ ಯೋಜನೆಗಳ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದೆ. ಮತದಾರರಿಗೆ ನೇರವಾಗಿ ಯೋಜನೆಗಳ ಲಾಭವನ್ನು ವರ್ಗಾವಣೆ ಮಾಡಲಾಗಿದೆ. ಅವೆಲ್ಲವೂ ಬಹಿರಂಗವಾಗಿ ನಡೆದಿವೆ. ಆದರೂ ಚುನಾವಣಾ ಆಯೋಗ ಮೌನವಹಿಸಿತ್ತು, ಯಾವುದೇ ಪರಿಶೀಲನೆಗೆ ಒಳಪಡಿಸದೆ ಯೋಜನೆಗಳನ್ನು ಮುಂದುವರಿಸಲು ಅನುಮತಿ ನೀಡಿತ್ತು ಎಂದು ಹೇಳಿದ್ದಾರೆ.
ಇದು ನಿಷ್ಪಕ್ಷಪಾತ ನಡೆಯಲ್ಲ, ಇದು ಒಂದು ಪಕ್ಷಕ್ಕೆ ನೀಡಿದ ಸಹಕಾರವಾಗಿದೆ. ಬಿಜೆಪಿ ಅಥವಾ ಎನ್ಡಿಎ ಸರ್ಕಾರಗಳು ಏನು ಮಾಡಿದರೂ ಚುನಾವಣಾ ಆಯೋಗ ಕಣ್ಣು ಮುಚ್ಚಿಕೊಂಡಿರುತ್ತದೆ. ಆದರೆ ಕರ್ನಾಟಕ ಸರ್ಕಾರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿರುವಾಗ ಅದೇ ಆಯೋಗವು ಕ್ಯಾತೆ ತೆಗೆಯುತ್ತಿದೆ. ಈ ಇಬ್ಬಗೆಯ ನೀತಿಯು ಚುನಾವಣಾ ಆಯೋಗದ ಪಕ್ಷಪಾತವನ್ನು ಬಯಲು ಮಾಡುತ್ತದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಗುರಿಯಾಗಿಸಿ ದಾಳಿ ಮಾಡುವುದು ಕೇವಲ ರಾಜಕೀಯ ಎಂದೆನಿಸುವುದಿಲ್ಲ. ಇದು ಬಡವರ ವಿರುದ್ಧ, ಮಹಿಳೆಯರ ವಿರುದ್ಧ ಮತ್ತು ಕರ್ನಾಟಕದ ವಿರುದ್ಧದ ಪರೋಕ್ಷ ದಾಳಿಯಾಗಿದೆ. ನುಡಿದಂತೆ ನಡೆವ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಸರ್ಕಾರವು ಚುನಾವಣಾ ಆಯೋಗದ ಇಂತಹ ಗೊಡ್ಡು ಬೆದರಿಕೆಗಳಿಗೆ ಬಗ್ಗದೆ ತಾನು ಕೊಟ್ಟ ಭರವಸೆಗಳನ್ನು ಪೂರೈಸುವಲ್ಲಿ ಬದ್ಧವಾಗಿರುತ್ತದೆ ಮತ್ತು ಪ್ರತಿ ಕನ್ನಡಿಗನ ಸೇವೆಯನ್ನು ಎಂದಿನಂತೆ ಮುಂದುವರಿಸಲಿದೆ ಎಂದಿದ್ದಾರೆ.

