ಬಾಗಲಕೋಟೆ/ ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ ಉಪಚುನಾವಣೆ ನಡೆಯುತ್ತಿದ್ದು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಚುನಾವಣಾ ಆಯೋಗವು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಮತಗಟ್ಟೆಗಳಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ಕೊಂಡೊಯ್ಯುವ ಸಿಬ್ಬಂದಿಗೆ ಜವಾಬ್ದಾರಿ ಹಂಚಿಕೆ ಮಾಡುವ ‘ಮಸ್ಟರಿಂಗ್’ ಪ್ರಕ್ರಿಯೆ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ನಡೆಯಿತು. ಬಳಿಕ ತಮಗೆ ನಿಯೋಜಿಸಿದ ಮತಗಟ್ಟೆಗಳತ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಭದ್ರತಾ ಸಿಬ್ಬಂದಿಯೊಂದಿಗೆ ವಿವಿಧ ವಾಹನಗಳಲ್ಲಿ ಪ್ರಯಾಣ ಬೆಳೆಸಿದರು.
\ಮಸ್ಟರಿಂಗ್ ಕೇಂದ್ರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ಪೊಲೀಸರು, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಯು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಎಲ್ಲರೂ ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದರು.
ಯಾರೆಲ್ಲಾ ನಿಯೋಜನೆ: ಪ್ರತಿ ಮತಗಟ್ಟೆಗೂ ಒಬ್ಬ ಪಿಆರ್ಒ (ಮತಗಟ್ಟೆ ಅಧ್ಯಕ್ಷಾಧಿಕಾರಿ), ಎಪಿಆರ್ಒ (ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ), ಇಬ್ಬರು ಮತಗಟ್ಟೆ ಅಧಿಕಾರಿಗಳು, ‘ಡಿ’ ಗ್ರೂಪ್ ಸಿಬ್ಬಂದಿ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಯನ್ನು (ಸಿಎಪಿಎಫ್) ನಿಯೋಜಿಸಲಾಗಿದೆ. ಇವರೊಂದಿಗೆ ಬಿಎಲ್ಒಗಳು, ಮತಗಟ್ಟೆ ಏಜೆಂಟರು ಕಾರ್ಯನಿರ್ವಹಿಸಲಿದ್ದಾರೆ.
ರಾಷ್ಟ್ರೀಯ ಸೇವಾ ಯೋಜನೆಯ (ಎನ್ಎಸ್ಎಸ್) 300 ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯೂ ಮತಗಟ್ಟೆಗಳ ಬಳಿ ಕರ್ತವ್ಯ ನಿರ್ವಹಿಸಲಿದ್ದಾರೆ.
800 ರಿಂದ 1,200 ಮತಗಳಿಗೆ ಒಂದರಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹೆಚ್ಚು ಮತಗಳಿರುವ ವ್ಯಾಪ್ತಿಯಲ್ಲಿ ಒಂದೇ ಶಾಲೆಯ ಬೇರೆ ಬೇರೆ ಕೊಠಡಿಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನೂ ಸ್ಥಾಪಿಸಲಾಗಿದೆ.
ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್, ಮತದಾರರ ಪಟ್ಟಿಯ ಪ್ರತಿ, ಏಜೆಂಟರ ನೇಮಕಾತಿ ನಮೂನೆ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪಡೆದ ಮತಗಟ್ಟೆ ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಂಡರು.
ಏ.9ರಂದು ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಲಿದೆ. ಸಂಜೆ 6ರ ವೇಳೆಗೆ ಮತಗಟ್ಟೆಯ ಆವರಣದೊಳಗೆ ಇರುವ ಮತದಾರರಿಗೆ ಟೋಕನ್ ನೀಡಿ ಗೇಟ್ನ ಬೀಗ ಹಾಕಲಾಗುತ್ತದೆ. ಗೇಟ್ ಒಳಗಡೆ ಇರುವವರಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಮತಗಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.
ಅನಾರೋಗ್ಯ.. ಮಕ್ಕಳ ಆರೈಕೆ.. ಮತಗಟ್ಟೆ ಅಧಿಕಾರಿಗಳಾಗಿ ನಿಯೋಜನೆಗೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯು ವಿವಿಧ ಕಾರಣಗಳನ್ನು ನೀಡಿ ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಚುನಾವಣಾಧಿಕಾರಿಗೆ ಮನವಿ ಸಲ್ಲಿಸುತ್ತಿರುವ ದೃಶ್ಯ ಕಂಡು ಬಂತು.
\ಅನಾರೋಗ್ಯ, ಮಕ್ಕಳ ಆರೈಕೆ ಸೇರಿದಂತೆ ಇನ್ನಿತರ ಕಾರಣಗಳನ್ನು ತಿಳಿಸಿ ಚುನಾವಣಾಧಿಕಾರಿಯ ಮನವೊಲಿಸುತ್ತಿರುವುದು ಕಂಡುಬಂತು. ಸಕಾರಣ ನೀಡಿದ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಅವರ ಸ್ಥಾನಕ್ಕೆ ಹೆಚ್ಚುವರಿಯಾಗಿ ಮೀಸಲಿಟ್ಟಿದ್ದ ಅಧಿಕಾರಿಗಳನ್ನು ನಿಯೋಜಿಸಲಾಯಿತು
ಆರೋಗ್ಯ ತಪಾಸಣೆ, ಔಷಧಿ ವಿತರಣೆ
ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯ ಇಲಾಖೆಯ ಸಿಬ್ಬಂದಿಯು ರಕ್ತದೊತ್ತಡ ಪರಿಶೀಲಿಸಿ, ಅವಶ್ಯವಿರುವ ಔಷಧಿಗಳನ್ನೂ ವಿತರಿಸಿದರು. ಸಿಬ್ಬಂದಿಯು ಆರೋಗ್ಯವಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ಚುನಾವಣಾ ಕರ್ತವ್ಯಕ್ಕೆ ಕಳಿಸಲಾಯಿತು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದರು.
19

